ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆಯಲ್ಲೇ ಅಣಕು ಶವ ಸುಟ್ಟು ಪ್ರತಿಭಟನೆ

Update: 2018-09-05 16:17 GMT

ಮಂಗಳೂರು, ಸೆ. 5: ಸುರತ್ಕಲ್-ಕಾನ-ಬಾಳ- ಎಂಆರ್‌ಪಿಎಲ್ ಚತುಷ್ಪಥ ರಸ್ತೆ ಕಾಮಗಾರಿ ಕೂಡಲೇ ಆರಂಭಿಸಲು ಒತ್ತಾಯಿಸಿ ಡಿವೈಎಫ್‌ಐ, ಸಿಐಟಿಯು ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಬಾಳ ಬಸ್ ನಿಲ್ದಾಣದ ಬಳಿಯಿಂದ ಕಾನ ಕಟ್ಲದವರಗೆ ನಗರಾಡಳಿತದ ಅಣಕು ಶವಯಾತ್ರೆ ನಡೆಸಿ ನಂತರ ರಸ್ತೆ ಗುಂಡಿಯಲ್ಲೇ ಶವ ಸುಟ್ಟು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಜನರ ಹೋರಾಟ ಮತ್ತು ಒತ್ತಾಯದ ಪ್ರತಿಫಲವಾಗಿ 58 ಕೋಟಿ ರೂ. ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ನಗರ ಪಾಲಿಕೆಯು ಬದಲಾದ ರಾಜಕೀಯ ಸ್ಥಿತಿಯಲ್ಲಿ ನಗರಾಡಳಿತ ಕಾಮಗಾರಿ ಆರಂಭಿಸದೆ ಟೆಂಡರ್ ರದ್ದು ಮಾಡುವ ಪ್ರಯತ್ನದ ಹಿಂದೆ ಜನಪ್ರತಿನಿಧಿಗಳ ಹಣದಾಸೆಯ ಲಂಚಕೋರ, ನೀತಿಗೆಟ್ಟ ರಾಜಕೀಯ ನಡೆಯುತ್ತಿರುವುದು ಖೇದಕರ ಎಂದರು.

ರಸ್ತೆ ದುರವಸ್ಥೆಯಿಂದ ಜನ ಕಂಗಾಲಾಗಿದ್ದು, ಕೈಕಾಲು, ಸೊಂಟ ಮುರಿದುಕೊಂಡು ಒದ್ದಾಡುತ್ತಿದ್ದಾರೆ. ಎಂಆರ್‌ಪಿಎಲ್ ನಂತಹ ಬೃಹತ್ ಕಂಪೆನಿಗಳು ಯಥೇಚ್ಛವಾಗಿ ರಸ್ತೆಯನ್ನು ಬಳಸಿದರೂ ರಸ್ತೆ ಅಭಿವೃದ್ಧಿಗೆ ಮಾತ್ರ ಕೈಜೋಡಿಸುತ್ತಿಲ್ಲ. ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಿ ಚತುಷ್ಪಥ ಕಾಮಗಾರಿ ಆರಂಭಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡರಾದ ಶ್ರೀನಾಥ್ ಕುಲಾಲ್, ಅಜ್ಮಲ್ ಅಹ್ಮದ್, ಬಿ.ಕೆ ಮಕ್ಸೂದ್, ಐ.ಮುಹಮ್ಮದ್, ಉದಯ ಕಾನ, ನಿಯಾಝ್ ಬೈಕಂಪಾಡಿ, ಮುಸ್ತಫಾ ಅಂಗರಗುಂಡಿ, ಜಾರ್ಜ್, ಹನೀಫ್ ಕುಳಾಯಿ, ಹಂಝ ಮೈಂದಗುರಿ, ಸಮೀರ್ ಕೃಷ್ಣಾಪುರ, ಹೋರಾಟ ಸಮಿತಿ ಮುಂದಾಳುಗಳಾದ ಅಬೂಬಕ್ಕರ್ ಬಾವ ಜೋಕಟ್ಟೆ, ಹನೀಫ್, ಎಂ.ಎಂ. ಖಾದರ, ಎಂ.ಕೆ ಇಬ್ರಾಹೀಂ, ಸಿಐಟಿಯು ಮುಖಂಡರಾದ ಮೊಯ್ದಿನಬ್ಬ, ಆರಿಫ್ ಮತ್ತು ರಶೀದ್ ಮಂಗಳಪೇಟೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News