ನೂತನ ಪಾಕ್ ಅಧ್ಯಕ್ಷರಿಗಿದೆ ಭಾರತದ ಜೊತೆ ವಿಶೇಷ ಸಂಬಂಧ

Update: 2018-09-05 17:29 GMT

ಇಸ್ಲಾಮಾಬಾದ್, ಸೆ. 5: ಪಾಕಿಸ್ತಾನದ ನೂತನ ಅಧ್ಯಕ್ಷ ಡಾ. ಆರಿಫ್ ಅಲ್ವಿ ಭಾರತದ ಜೊತೆ ವಿಶಿಷ್ಟ ಸಂಬಂಧ ಹೊಂದಿದ್ದಾರೆ. ಅವರ ತಂದೆ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂರ ದಂತವೈದ್ಯರಾಗಿದ್ದರು.

ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ವೆಬ್‌ಸೈಟ್‌ನಲ್ಲಿ ಹಾಕಲಾಗಿರುವ ನೂತನ ಅಧ್ಯಕ್ಷರ ಕಿರು ಪರಿಚಯದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಪ್ರಧಾನಿ ಇಮ್ರಾನ್ ಖಾನ್‌ರ ನಿಕಟವರ್ತಿ ಹಾಗೂ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ಅಲ್ವಿ ಮಂಗಳವಾರ ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಸ್ಮರಿಸಬಹುದಾಗಿದೆ.

69 ವರ್ಷದ ಡಾ. ಆರಿಫ್ ಕೂಡ ದಂತವೈದ್ಯರು.

ನೆಹರೂರ ದಂತವೈದ್ಯರ ಮಗ ಎನ್ನುವ ಸಂಬಂಧಕ್ಕೆ ಹೊರತಾಗಿ ಇನ್ನೂ ಒಂದು ಸಂಬಂಧವನ್ನು ಅವರು ಭಾರತದ ಜೊತೆ ಹೊಂದಿದ್ದಾರೆ. 1947ರಲ್ಲಿ ಭಾರತ ವಿಭಜನೆಗೊಂಡಾಗ, ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದ ಕುಟುಂಬದಿಂದ ಬಂದ ಅಧ್ಯಕ್ಷರ ಪೈಕಿ ಅವರೂ ಒಬ್ಬರು.

ಆರಿಫ್‌ರ ತಂದೆ ಭಾರತದಿಂದ ವಲಸೆ ಬಂದು ಕರಾಚಿಯಲ್ಲಿ ನೆಲೆಸಿದ ಬಳಿಕ, 1947ರಲ್ಲಿ ಆರಿಫ್ ಹುಟ್ಟಿದರು.

ಮುಶರ್ರಫ್ ಕೂಡ ಭಾರತೀಯ ವಲಸಿಗ

ಹಿಂದಿನ ಅಧ್ಯಕ್ಷರಾದ ಮಮ್ನೂನ್ ಹುಸೈನ್‌ರ ಕುಟುಂಬ ಆಗ್ರಾದಿಂದ ವಲಸೆ ಬಂದಿದ್ದರೆ, ಪರ್ವೇೀಝ್ ಮುಶರ್ರಫ್‌ರ ಕುಟುಂಬ ಹೊಸದಿಲ್ಲಿಯಿಂದ ವಲಸೆ ಬಂದಿತ್ತು.

ಆರಿಫ್‌ರ ತಂದೆ ಡಾ. ಹಬೀಬುರ್ರಹ್ಮಾನ್ ಇಲಾಹಿ ಅಲ್ವಿ ಭಾರತ ವಿಭಜನೆಗೆ ಮೊದಲು ನೆಹರೂರ ದಂತವೈದ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News