ಮಂಗಳೂರು: ರೈಲಿನಲ್ಲಿ ನಿಷೇಧಿತ ತಂಬಾಕು ವಶ

Update: 2018-09-05 17:29 GMT

ಮಂಗಳೂರು, ಸೆ.5: ರೈಲಿನಲ್ಲಿ ವಾರಸುದಾರರಿಲ್ಲದ ಎರಡು ಬ್ಯಾಗ್‌ಗಳಲ್ಲಿ ಸಾಗಿಸುತ್ತಿದ್ದ 50 ಕೆ.ಜಿ. ನಿಷೇಧಿತ ತಂಬಾಕು ಉತ್ಪನ್ನವನ್ನು ರೈಲ್ವೆ ಪೊಲೀಸರು ಬುಧವಾರ ಮಧ್ಯಾಹ್ನ ವಶಪಡಿಸಿಕೊಂಡಿದ್ದಾರೆ.

ನಿಷೇಧಿತ ತಂಬಾಕಿನ ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು-ಕಾಸರಗೋಡು ಎಕ್ಸ್‌ಪ್ರೆಸ್(16348) ಟ್ರೇನ್‌ನ ಎಸ್-9 ಕೋಚ್‌ನಲ್ಲಿ ಎರಡು ಬ್ಯಾಗ್‌ಗಳು ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದವು. ಈ ವೇಳೆ ಬ್ಯಾಗ್‌ಗಳ ಯಾವುದೇ ವಾರಸುದಾರರು ಮುಂದೆ ಬರಲಿಲ್ಲ. ಬಳಿಕ ತಪಾಸಣೆ ನಡೆಸಿದಾಗ 50 ಕೆ.ಜಿ. ತೂಕದ 50 ಸಾವಿರ ರೂ. ಮೌಲ್ಯದ ನಿಷೇಧಿತ ತಂಬಾಕು ಉತ್ಪನ್ನ ಇರುವುದು ಪತ್ತೆಯಾಗಿದೆ.

ರೈಲಿನಲ್ಲಿದ್ದ ಸೊತ್ತನ್ನು ಕಾಸರಗೋಡಿನಲ್ಲಿ ಆರ್‌ಪಿಎಫ್ ಪೊಲೀಸರು ವಶಪಡಿಸಿಕೊಂಡು, ಮುಂದಿನ ಕ್ರಮಕ್ಕಾಗಿ ಕಾಸರಗೋಡು ರೈಲ್ವೆ ಅಬಕಾರಿ ರೇಂಜ್ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ಮತ್ತು ಕಾಸರಗೋಡು ರೈಲ್ವೆ ಅಧಿಕಾರಿಗಳು ಕೈಗೊಂಡಿದ್ದ ಅಕ್ರಮ ಚಟುವಟಿಕೆಗಳ ವಿರುದ್ಧದ ವಿಶೇಷ ಕಾರ್ಯಾಚರಣೆಯಲ್ಲಿ ಎಎಸ್‌ಐಪಿಎಫ್/ಎಂಎಕ್ಯೂ ಬಿನೋಯ್ ಕುರಿಯನ್, ಪ್ರಮೋದ್, ಕೆ.ಎ.ಮಣಿ, ವಿ.ವಿ.ಶಶಿಧರನ್, ಗೋಪಿನಾಥನ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News