ಯುವತಿಯ ಅತ್ಯಾಚಾರ, ಬೆದರಿಕೆಯೊಡ್ಡಿದ ಪ್ರಕರಣ: ಅಪರಾಧಿಗೆ ಜೈಲು ಶಿಕ್ಷೆ; ದಂಡ

Update: 2018-09-05 17:32 GMT

ಮಂಗಳೂರು, ಸೆ.5: ಭಿನ್ನ ಸಾಮರ್ಥ್ಯದ ಯುವತಿ ಮೇಲೆ ಅತ್ಯಾಚಾರ ಎಸಗಿ, ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ.ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ತೆಂಕ ಎಕ್ಕಾರು ಗ್ರಾಮದ ಪೆರ್ಮುದೆ ಶೇಖರ ಶೆಟ್ಟಿಗಾರ್ (53) ಶಿಕ್ಷೆಗೊಳಗಾದ ಅಪರಾಧಿ. ಈತನ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣಕ್ಕೆ 1ವರ್ಷ ಜೈಲು ಹಾಗೂ 5 ಸಾವಿರ ರೂ.ದಂಡ, ಕೊಲೆ ಬೆದರಿಕೆ ಒಡ್ಡಿರುವುದಕ್ಕೆ 4 ತಿಂಗಳು ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ಸಂತ್ರಸ್ತೆಗೆ ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ಅತ್ಯಾಚಾರ ಆರೋಪ ಖುಲಾಸೆಗೊಂಡಿದೆ.

ಪ್ರಕರಣದ ಹಿನ್ನೆಲೆ: ಶೇಖರ ಶೆಟ್ಟಿಗಾರ್‌ನ ನೆರೆಮನೆಯಲ್ಲಿ ಬಡ ಕುಟುಂಬ ವಾಸವಾಗಿದೆ. ಸಂತ್ರಸ್ತೆ ಭಿನ್ನ ಸಾಮರ್ಥ್ಯ ಹೊಂದಿದ್ದು, ತಾಯಿ ಮತ್ತು ತಂಗಿಯನ್ನು ಒಳಗೊಂಡ ಚಿಕ್ಕ ಕುಟುಂಬ. 2017 ರ ಫೆ.21ರಂದು ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದರು. ತಂಗಿ ದೊಡ್ಡಮ್ಮನ ಮನೆಗೆಂದು ಹೋಗಿದ್ದಳು. ಈ ಸಂದರ್ಭ ನೆರೆಮನೆಯ ಶೇಖರ ಶೆಟ್ಟಿಗಾರ್ ಬಂದು ಭಿನ್ನ ಸಾಮರ್ಥ್ಯದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ತಾಯಿಯೊಂದಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ದೊಡ್ಡಮ್ಮನ ಮನೆಯಿಂದ ಮರಳಿ ಮನೆಗೆ ಬಂದಾಗ ಅಕ್ಕ ಧರಿಸಿದ ವಸ್ತ್ರ ಹರಿದಿರುವುದು ಗಮನಕ್ಕೆ ಬಂದಿದೆ. ಈ ಸಂದರ್ಭ ವಿಚಾರಿಸಿದಾಗ ಶೇಖರ ಅತ್ಯಾಚಾರ ಎಸಗಿರುವುದನ್ನು ತಿಳಿಸಿದ್ದಾಳೆ.

ಶೇಖರ ಶೆಟ್ಟಿಗಾರ್ ಬೆದರಿಕೆ ಒಡ್ಡಿದ ಕಾರಣ ಭಯದಿಂದ ತಕ್ಷಣ ಪೊಲೀಸರಿಗೆ ದೂರು ನೀಡಿರಲಿಲ್ಲ. ಈ ವಿಚಾರ ಸಂಬಂಧಿಕರೊಬ್ಬರಿಗೆ ಗೊತ್ತಾಗಿ ಅವರು ತಿಳಿಸಿದ ಮೇರೆಗೆ 21 ದಿನಗಳ ಬಳಿಕ 2017 ಮಾರ್ಚ್ 14ರಂದು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂದರ್ಭ ಸಂತ್ರಸ್ತೆಯನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿ ಹೇಳಿಕೆ ಪಡೆಯಲಾಗಿತ್ತು.

17 ಸಾಕ್ಷಿ ವಿಚಾರಣೆ
ಬಜ್ಪೆ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 17 ಸಾಕ್ಷಿ ವಿಚಾರಣೆ ನಡೆಸಲಾಗಿದೆ. 18 ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರಾದ ಡಿ.ಟಿ.ಪುಟ್ಟರಂಗ ಸ್ವಾಮಿ ಅವರು ಸಾಕ್ಷಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಸರಕಾರಿ ಅಭಿಯೋಜಕರಾದ ಜುಡಿತ್ ಒ.ಎಂ.ಕ್ರಾಸ್ತ ಸರಕಾರದ ಪರವಾಗಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News