ಚೆನ್ನೈ: ಮೌನರ್ಯಾಲಿ ಮೂಲಕ ಅಳಗಿರಿ ಬಲಪ್ರದರ್ಶನ

Update: 2018-09-05 17:37 GMT

ಚೆನ್ನೈ, ಸೆ.5: ಡಿಎಂಕೆಯ ಹಿರಿಯ ಮುಖಂಡ ಎಂಕೆ ಕರುಣಾನಿಧಿ ಮೃತಪಟ್ಟ ತಿಂಗಳಾವಧಿಯಲ್ಲೇ ಪಕ್ಷದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಕರುಣಾನಿಧಿಯ ಹಿರಿಯ ಪುತ್ರ, ಪಕ್ಷದಿಂದ ಉಚ್ಛಾಟಿತರಾಗಿರುವ ಎಂಕೆ ಅಳಗಿರಿ ಬುಧವಾರ ತನ್ನ ಬೆಂಬಲಿಗರೊಂದಿಗೆ ಚೆನ್ನೈಯಲ್ಲಿ ವೌನ ಮೆರವಣಿಗೆ ನಡೆಸುವ ಮೂಲಕ ಬಲಪ್ರದರ್ಶನ ನಡೆಸಿದ್ದಾರೆ.

ಕರಿಬಟ್ಟೆ ಧರಿಸಿ ತ್ರಿಪ್ಲಿಕೇನ್‌ನಿಂದ ಚೆನ್ನೈಯ ಮರೀನಾ ಬೀಚ್‌ನಲ್ಲಿರುವ ಕರುಣಾನಿಧಿಯವರ ಸ್ಮಾರಕದವರೆಗೆ ತನ್ನ ಬೆಂಬಲಿಗರೊಂದಿಗೆ ಮೌನ ಮೆರವಣಿಗೆಯಲ್ಲಿ ಸಾಗಿದ ಅಳಗಿರಿ, ಡಿಎಂಕೆಯ ಬಹುತೇಕ ಸದಸ್ಯರ ಬೆಂಬಲ ತನಗಿದೆ ಎಂದು ಹೇಳಿಕೊಂಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ಬೆಂಬಲಿಗರು, ‘ ಕೈ ಕೈ ಜೋಡಿಸಿ ಡಿಎಂಕೆ ಪಕ್ಷವನ್ನು ಒಗ್ಗೂಡಿಸೋಣ’ ಎಂಬ ಬ್ಯಾನರ್ ಹಿಡಿದಿದ್ದರು. ಕೆಲ ದೂರ ನಡೆದುಕೊಂಡು ಸಾಗಿದ ಅಳಗಿರಿ ಬಳಿಕ ತೆರೆದ ವಾಹನದ ಮೇಲೆ ನಿಂತುಕೊಂಡು ಬೆಂಬಲಿಗರತ್ತ ಕೈಬೀಸಿ ಹುರಿದುಂಬಿಸಿದರು.

ಈ ರ್ಯಾಲಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬೆಂಬಲಿಗರು ಪಾಲ್ಗೊಂಡಿದ್ದರು ಎಂದು ಅಳಗಿರಿ ಹೇಳಿದ್ದಾರೆ. ಆದರೆ ರ್ಯಾಲಿಯ ಬಳಿಕ ಯಾವುದೇ ಸಭೆ ಅಥವಾ ಭಾಷಣ ಕಾರ್ಯಕ್ರಮ ಇರಲಿಲ್ಲ. ಕಾನೂನು ಸುವ್ಯವಸ್ಥೆಯ ನಿಟ್ಟಿನಲ್ಲಿ ಸುಮಾರು 1000 ಪೊಲೀಸರನ್ನು ರ್ಯಾಲಿ ಸಾಗುವ ಮಾರ್ಗದಲ್ಲಿ ನಿಯೋಜಿಸಲಾಗಿತ್ತು. ಕರುಣಾನಿಧಿಯನ್ನು ಹೊರತುಪಡಿಸಿ ಬೇರೆ ಯಾರನ್ನೂ ತನ್ನ ನಾಯಕ ಎಂದು ಒಪ್ಪಿಕೊಳ್ಳಲಾರೆ ಎಂದು ಅಳಗಿರಿ ಹೇಳಿದ್ದಾರೆ.

ಆದರೆ ಕಳೆದ ವಾರ ಹೇಳಿಕೆ ನೀಡಿದ್ದ ಅಳಗಿರಿ, ತಾವು ಡಿಎಂಕೆ ಸೇರಲು ಸಿದ್ಧ. ಸ್ಟಾಲಿನ್‌ರನ್ನು ನಾಯಕನೆಂದು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದರೆಂಬ ಕಾರಣಕ್ಕೆ ಅಳಗಿರಿಯನ್ನು 2014ರಲ್ಲಿ ಡಿಎಂಕೆಯಿಂದ ಉಚ್ಛಾಟಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News