ಸುಳ್ಳು ಸುದ್ದಿ ತಡೆ ರೇಡಿಯೊ ಅಭಿಯಾನ ವಿಸ್ತರಿಸಿದ ವಾಟ್ಸಾಪ್

Update: 2018-09-05 17:41 GMT

ಹೊಸದಿಲ್ಲಿ, ಸೆ.5: ಸುಳ್ಳು ಸುದ್ದಿ ಪ್ರಸಾರವನ್ನು ತಡೆಯುವ ಪ್ರಯತ್ನದ ಅಂಗವಾಗಿ ಭಾರತದಲ್ಲಿ ಆರಂಭಿಸಿರುವ ರೇಡಿಯೊ ಅಭಿಯಾನವನ್ನು ಮತ್ತೂ 10 ರಾಜ್ಯಗಳಿಗೆ ವಿಸ್ತರಿಸುವುದಾಗಿ ವಾಟ್ಸಾಪ್ ತಿಳಿಸಿದೆ.

ಫೇಸ್‌ಬುಕ್ ಮಾಲಕತ್ವದ ವಾಟ್ಸಾಪ್‌ನಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಸುದ್ದಿಯ ಕಾರಣದಿಂದ ದೇಶದಲ್ಲಿ ಹಲವೆಡೆ ಗುಂಪು ಹಲ್ಲೆ ಮತ್ತು ಹತ್ಯೆಯ ಘಟನೆ ನಡೆದಿರುವುದನ್ನು ಉಲ್ಲೇಖಿಸಿದ್ದ ಸರಕಾರ ಈ ಬಗ್ಗೆ ತೀವ್ರ ಆಕ್ಷೇಪ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬಳಕೆದಾರರು ತಮಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬರುವ ಸುದ್ದಿ, ಮಾಹಿತಿಗಳ ಸತ್ಯಾಸತ್ಯತೆಯನ್ನು ದೃಢಪಡಿಸಿಕೊಂಡ ಬಳಿಕವೇ ಇವನ್ನು ಇನ್ನೊಬ್ಬರಿಗೆ ರವಾನಿಸಬೇಕು ಎಂದು ತಿಳಿಸುವ ರೇಡಿಯೊ ಅಭಿಯಾನವನ್ನು ಆಗಸ್ಟ್ 29ರಂದು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ತಾನ, ಛತ್ತೀಸ್‌ಗಡ ಸೇರಿದಂತೆ 7 ರಾಜ್ಯಗಳಲ್ಲಿ ಆರಂಭಿಸಿದೆ.

ಸೆ.5ರಂದು ದ್ವಿತೀಯ ಹಂತದಲ್ಲಿ ಅಸ್ಸಾಂ, ತ್ರಿಪುರ, ಪ.ಬಂಗಾಲ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತು ತಮಿಳುನಾಡಿನಲ್ಲಿ ರೇಡಿಯೊ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನವು ಎಂಟು ಪ್ರಾದೇಶಿಕ ಭಾಷೆಗಳಾದ ಅಸ್ಸಾಮೀ, ಬಂಗಾಳಿ, ಗುಜರಾತಿ, ಕನ್ನಡ, ಮರಾಠಿ, ತೆಲುಗು, ಒರಿಯಾ ಮತ್ತು ತಮಿಳು ಭಾಷೆಯಲ್ಲಿ ಆಕಾಶವಾಣಿಯ 83 ಪ್ರಸಾರ ಕೇಂದ್ರಗಳ ಮೂಲಕ 15 ದಿನ ಪ್ರಸಾರವಾಗಲಿದೆ ಎಂದು ವಾಟ್ಸಾಪ್ ಹೇಳಿಕೆ ತಿಳಿಸಿದೆ. ತಪ್ಪು ಮಾಹಿತಿಗಳನ್ನು ಕಂಡುಹಿಡಿಯುವ ಸುಲಭ ವಿಧಾನದ ಮಾಹಿತಿಯನ್ನು ಈ ಅಭಿಯಾನದಲ್ಲಿ ಬಳಕೆದಾರರಿಗೆ ನೀಡಲಾಗುವುದು ಅಲ್ಲದೆ ಪ್ರಚೋದಕ ಸುದ್ದಿಗಳಿದ್ದರೆ ತಕ್ಷಣ ಆ ಬಗ್ಗೆ ವರದಿ ಸಲ್ಲಿಸುವಂತೆ ವಿನಂತಿಸಲಾಗುವುದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News