ರಾಜ್ಯ ಸೀನಿಯರ್ಸ್, ಜ್ಯೂನಿಯರ್ಸ್ ಅಥ್ಲೆಟಿಕ್ಸ್: ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ

Update: 2018-09-05 18:25 GMT

ಮೂಡುಬಿದಿರೆ, ಸೆ. 5: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಮೂರು ದಿನಗಳು ನಡೆದ ರಾಜ್ಯ ಕಿರಿಯರ ಮತ್ತು ಹಿರಿಯರ ಅಥ್ಲೆಟಿಕ್ ಚಾಂಪಿಯನ್‍ಶಿಪ್ 2018ರಲ್ಲಿ ಮೂಡುಬಿದಿರೆಯ ಆಳ್ವಾಸ್ ಸ್ಪೋಟ್ಸ್ ಕ್ಲಬ್ 582 ಅಂಕ ಪಡೆದು ಸಮಗ್ರ ಪ್ರಶಸ್ತಿ ಹಾಗೂ ಬೆಂಗಳೂರಿನ ಡಿವೈಇಎಸ್ 177 ಅಂಕಗಳನ್ನು ಪಡೆದ ರನ್ನರ್‍ ಅಪ್ ಪ್ರಶಸ್ತಿ ಪಡೆದುಕೊಂಡಿದೆ.

ಕ್ರೀಡಾಕೂಟದ ಒಟ್ಟು 10 ವಿಭಾಗಗಳಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್ `ತಂಡ ಪ್ರಶಸ್ತಿ' ಪಡೆದುಕೊಂಡಿದೆ. 

ಹೊಸ ಕೂಟ ದಾಖಲೆಗಳು

ಕೊನೆಯ ದಿನ 7 ಹೊಸ ಕೂಟ ದಾಖಲೆ ಸಹಿತ ಮೂರು ದಿನಗಳ ಕ್ರೀಡಾಕೂಟದಲ್ಲಿ ಒಟ್ಟು 28 ಹೊಸ ಕೂಟ ದಾಖಲೆಗಳಾಗಿವೆ. ಆಳ್ವಾಸ್ ಸ್ಪೋಟ್ಸ್ ಕ್ಲಬ್ ಈ ಕ್ರೀಡಾಕೂಟದಲ್ಲಿ 19 ಕೂಟ ದಾಖಲೆಯನ್ನು ಮಾಡಿ ಸಾಧನೆ ಮೆರೆದಿದೆ.

ಅಂಡರ್-14 ಹುಡುಗರ ಶಾಟ್‍ಪುಟ್ ವಿಭಾಗದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‍ನ ಗಣೇಶ್ ಎಚ್.ಡಬ್ಲ್ಯು 13.39 ಮೀಟರ್ ಎಸೆದು ದಾಖಲೆ, ಅಂಡರ್-14 ಹುಡುಗಿಯರ ಶಾಟ್‍ವಿಭಾಗದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‍ನ ರಮ್ಯಶ್ರೀ ಜೈನ್ 11.35 ಮೀ. ಎಸೆದು ದಾಖಲೆ, ಅಂಡರ್ 20 ಮಹಿಳಾ ಹ್ಯಾಮರ್ ತ್ರೊ ವಿಭಾಗದಲ್ಲಿ ಆಳ್ವಾಸ್‍ನ ಅಮ್ರಿನ್ 44.76 ಮೀ. ದಾಖಲೆ , ಅಂಡರ್-16 ಮಹಿಳೆಯರ 3 ಕಿ.ಮೀ ನಡಿಗೆಯಲ್ಲಿ ಬೆಂಗಳೂರು ಸ್ಪೋಟ್ಸ್ ಕ್ಲಬ್‍ನ ಗೌತಮಿ ಪಿ. 16:46.2 ಸೆಕೆಂಡ್ ಕ್ರಮಿಸಿ ಹೊಸ ದಾಖಲೆ, ಅಂಡರ್-18 ಬಾಲಕರ ಶಾಟ್‍ಪುಟ್ ವಿಭಾಗದಲ್ಲಿ ಆಳ್ವಾಸ್‍ನ ನಾಗೇಂದ್ರ ಅಣ್ಣಪ್ಪ ನಾಯ್ಕ್ 16.67ಮೀ ಎಸೆದು ದಾಖಲೆ, ಅಂಡರ್-18 ಬಾಲಕರ 400ಮೀ. ಹರ್ಡಲ್ಸ್‍ನಲ್ಲಿ ಆಳ್ವಾಸ್‍ನ ಕೃಷ್ಣ ಆರ್.ಜಿ 55.2 ಸೆಕೆಂಡ್ಸ್ ಕ್ರಮಿಸಿ ದಾಖಲೆ ಹಾಗೂ ಅಂಡರ್-18 ಬಾಲಕರ ತ್ರಿಪಲ್ ಜಂಪ್ ವಿಭಾಗದಲ್ಲಿ ಡಿವೈಇಎಸ್ ಬೆಂಗಳೂರು ತಂಡದ ನವೀನ್ ಡಿ. 14.94 ಮೀಟರ್ ಜಿಗಿದು ದಾಖಲೆ ಮಾಡಿದ್ದಾರೆ.

ಉತ್ತಮ ಕ್ರೀಡಾಪಟುಗಳು: 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಿಯೋಲ್ ಅನ್ನ ಕಾರ್ನೆಲ್ರ್( ಬೆಂಗಳೂರು ಸ್ಪೋಟ್ಸ್ ಕ್ಲಬ್),  ಬಾಲಕರ 14 ವರ್ಷದೊಳಗಿನ ವಿಭಾಗದಲ್ಲಿ ಗಣೇಶ್( ಆಳ್ವಾಸ್), ಅಂಡರ್ 16 ಬಾಲಕಿಯರ ವಿಭಾಗದಲ್ಲಿ ವರ್ಷಾ( ಆಳ್ವಾಸ್), ಬಾಲಕರ ಅಂಡರ್ 16 ವಿಭಾಗದಲ್ಲಿ ಮಲ್ಲಿಕ್ ರಿಹಾನ್( ಬೆಂಗಳೂರಿನ ಡಿವೈಇಎಸ್), ಮಹಿಳೆಯರ ಅಂಡರ್ 18 ವಿಭಾಗ-ಎಸ್.ಬಿ ಸುಪ್ರಿಯಾ(ಆಳ್ವಾಸ್), ಪುರುಷರ ಅಂಡರ್ 18 ವಿಭಾಗ- ಆರ್ಯ ಎಸ್.(ಬೆಂಗಳೂರು ಗ್ರಾಮಾಂತರ),  ಮಹಿಳೆಯರ ಅಂಡರ್ 20 ವಿಭಾಗ-ಧಾನೇಶ್ವರಿ( ಡಿವೈಇಎಸ್ ಬೆಂಗಳೂರು), ಪುರಷರ ಅಂಡರ್ 20 ವಿಭಾಗ- ಕುಶಲ್ ಅಂಬೋರೆ( ಸಾಯಿ ಬೆಂಗಳೂರು), ಮಹಿಳಾ ವಿಭಾಗದಲ್ಲಿ ಸ್ನೇಹಾ ಪಿ.ಜೆ( ಆಥ್ಲೋನ್ ಫ್ಲೀಟ್ ಒಲಂಪಸ್) ಹಾಗೂ ಪುರಷರ ವಿಭಾಗದಲ್ಲಿ ರಾಧಕೃಷ್ಣ( ಅಶ್ವಿನಿ ಸ್ಪೋಟ್ಸ್ ಫೌಂಡೇಶನ್) ಬೆಸ್ಟ್ ಅಥ್ಲೇಟ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
 
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ, ಮಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ.ಕಿಶೋರ್ ಕುಮಾರ್, ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ರಾಜುವೇಲು, ಹಿರಿಯ ಉಪಾಧ್ಯಕ್ಷ ಮಹಾವೇಲು, ಟೆಕ್ನಿಕಲ್ ವಿಭಾಗ ಸಮಿತಿ ಅಧ್ಯಕ್ಷ ಆನಂದ, ಅಂತಾರಾಷ್ಟ್ರೀಯ ಕ್ರೀಡಾಪಟು ಸೋಮಶೇಖರ್ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು. ಸತೀಶ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News