‘ನೈಕ್’ ಉತ್ಪನ್ನಗಳನ್ನು ಸುಡುತ್ತಿರುವ ಅಮೆರಿಕನ್ನರು!

Update: 2018-09-06 07:28 GMT

ಹೊಸದಿಲ್ಲಿ, ಸೆ.6: ಖ್ಯಾತ ಕ್ರೀಡಾ ಉತ್ಪನ್ನಗಳ ತಯಾರಿಕಾ ಕಂಪೆನಿ ‘ನೈಕ್’ ಮಾಜಿ ಎನ್ ‍ಎಫ್ ‍ಎಲ್ ಫುಟ್ಬಾಲ್ ಆಟಗಾರ ಕೋಲಿನ್ ಕೇಪರ್ನಿಕ್ ಕಾಣಿಸಿಕೊಂಡಿರುವ ತನ್ನ ಹೊಸ `ಜಸ್ಟ್ ಡು ಇಟ್' ಜಾಹೀರಾತು ಅಭಿಯಾನ ಅನಾವರಣಗೊಳಿಸಿದ ಮರುದಿನವೇ ಹಲವಾರು ಅಮೆರಿಕನ್ನರು ತಮ್ಮ ಪ್ರತಿಭಟನೆ ತೋರ್ಪಡಿಸಲು ‘ನೈಕ್’ ಉತ್ಪನ್ನಗಳನ್ನು ಸುಡುವ ಫೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ 49 ಇಆರ್‍ಎಸ್ ತಂಡದ ಮಾಜಿ ಸದಸ್ಯರಾಗಿರುವ ಕೇಪರ್ನಿಕ್ 2016 ಎನ್‍ಎಫ್‍ಎಲ್ ಋತುವಿನಲ್ಲಿ ಅಮೆರಿಕಾ ರಾಷ್ಟ್ರಗೀತೆ ನುಡಿಸುತ್ತಿರುವ ಸಂದರ್ಭ ರಾಜ್ಯ ಪೊಲೀಸರ ವರ್ಣಬೇಧ ನೀತಿಯನ್ನು ಪ್ರತಿಭಟಿಸಿ ಒಂದು ಮೊಣಕಾಲೂರಿ ಪ್ರತಿಭಟಿಸಿದ್ದರಲ್ಲದೆ ನಂತರ ಹಲವಾರು ಇತರ ಪಂದ್ಯಾಟಗಳ ವೇಳೆಯೂ ಇದೇ ರೀತಿ ಮಾಡಿ ಪ್ರತಿಭಟಿಸಿದ್ದರು.

ಇದರ ನಂತರ ಅವರನ್ನು ತಂಡದಿಂದ ಕೈಬಿಡಲಾಗಿತ್ತಲ್ಲದೆ ಮುಂದೆ ಯಾವುದೇ ತಂಡ ಅವರನ್ನು ತಮ್ಮ ಜತೆ ಸೇರಿಸಿಕೊಂಡಿರಲಿಲ್ಲ. ರಾಷ್ಟ್ರಗೀತೆ ನುಡಿಸುವಾಗ ಪ್ರತಿಭಟಿಸಿದ ಆಟಗಾರರಿಗೂ ಎನ್‍ಎಫ್‍ಎಲ್ ಹೊಸ ಮಾರ್ಗಸೂಚಿಗಳನ್ನು  ಜಾರಿಗೊಳಿಸಿತ್ತು.

ಮಂಗಳವಾರ ನೈಕ್ ಕಂಪೆನಿಯ 30ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಗೊಂಡ ಜಾಹೀರಾತಿನ ಬೆನ್ನಿಗೇ ‘ನೈಕ್’ ಶೇರುಗಳ ಬೆಲೆ ಕುಸಿತ ಕಂಡಿತ್ತು.

ಈ ಹೊಸ ಜಾಹೀರಾತಿನಲ್ಲಿ ಕೇಪರ್ನಿಕ್ ಕಾಣಿಸಿಕೊಂಡಿದ್ದೇ ಅಲ್ಲದೆ  ಅದಕ್ಕೆ ನೀಡಲಾದ ಟ್ಯಾಗ್ ಲೈನ್ ``ಬಿಲೀವ್ ಇನ್ ಸಮ್ ತಿಂಗ್, ಇವನ್ ಇಫ್ ಇಟ್ ಮೀನ್ಸ್ ಸ್ಯಾಕ್ರಿಫೈಸಿಂಗ್ ಎವ್ರಿಥಿಂಗ್,'' (ಎಲ್ಲವನ್ನೂ ತ್ಯಾಗಗೊಳಿಸಬೇಕಾಗಿ ಬಂದರೂ  ಯಾವುದರಲ್ಲಾದರೂ ನಂಬಿಕೆಯಿರಿಸಿ) ಕೇಪರ್ನಿಕ್ ಅವರ ರಾಜಕೀಯ ನಿಲುವನ್ನು ಸೂಚಿಸುವಂತಿದೆ.

ಇದರಿಂದ ಅಸಮಾಧಾನಗೊಂಡ ಹಲವು ಜನರು ಕಂಪೆನಿಯ ಉತ್ಪನ್ನಗಳನ್ನು ಸುಡುತ್ತಿರುವ ಫೋಟೋ ಹಾಗೂ ವೀಡಿಯೋಗಳನ್ನು  ಪೋಸ್ಟ್ ಮಾಡುತ್ತಿದ್ದಾರಲ್ಲದೆ #ಬಾಯ್ಕಾಟ್ ನೈಕ್ ಹಾಗೂ #ಜಸ್ಟ್‍ಬರ್ನ್‍ಇಟ್ ಹ್ಯಾಶ್ ಟ್ಯಾಗ್ ಉಪಯೋಗಿಸುತ್ತಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ನೈಕ್ ಅಭಿಯಾನ ಟೀಕಿಸಿದ್ದಾರೆ. ``ಅವರು (ನೈಕ್) ವಿಪರೀತ ಸಂದೇಶ ಕಳುಹಿಸುತ್ತಿದ್ದಾರೆ. ಪ್ರಾಯಶಃ ಅದರ ಹಿಂದೆ ಅವರಿಗೊಂದು ಕಾರಣವಿರಬಹುದು,'' ಎಂದು ಅವರು ಹೇಳಿದ್ದಾರೆ.

 ಟೀಕಾಕಾರರ ನಡುವೆಯೇ ಕೇಪರ್ನಿಕ್ ಅವರನ್ನು  ಬೆಂಬಲಿಸುವವರೂ ಇದ್ದಾರೆ. ಅವರು ದೇಶಕ್ಕೆ ಹಾಗೂ ಧ್ವಜಕ್ಕೆ ಅಗೌರವ ತೋರಿಲ್ಲ ಎಂದು ಹೇಳುವವರೂ ಇದ್ದಾರಲ್ಲದೆ ನೈಕ್ ಉತ್ಪನ್ನಗಳನ್ನು ಸುಡುವುದು ಒಂದು ತಮಾಷೆಯ ಸಂಗತಿ ಎಂದೂ ಅವರು ಅಂದುಕೊಂಡಿದ್ದಾರೆ. ನೈಕ್ ಉತ್ಪನ್ನಗಳನ್ನು ಸುಡುವುದರಿಂದ ಅದು ಜನರಿಗೇ ನಷ್ಟವೇ ಹೊರತು ಕಂಪೆನಿಗಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News