ಮಂಗಳೂರು : ವಿಮಾನದಲ್ಲಿ ವಿದೇಶಕ್ಕೆ ಗಾಂಜಾ ಸಾಗಾಟ ಯತ್ನ; ಆರೋಪಿಗೆ 5 ವರ್ಷ ಜೈಲುಶಿಕ್ಷೆ

Update: 2018-09-06 14:13 GMT

ಮಂಗಳೂರು, ಸೆ.6: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಬಹರೈನ್‌ ಗೆ 4 ಕೆಜಿ ಗಾಂಜಾ ಸಾಗಾಟ ಮಾಡಲು ಯತ್ನಿಸಿದ ಪ್ರಕರಣದ ಆರೋಪಿಗೆ ಪ್ರಧಾನ ಸತ್ರ ನ್ಯಾಯಾಲಯ ಹಾಗೂ ಮಾದಕ ದ್ರವ್ಯ ಕಾಯ್ದೆಯಡಿಯ ವಿಶೇಷ ನ್ಯಾಯಾಲಯ 5ವರ್ಷ ಕಠಿಣ ಸಜೆ ಹಾಗೂ 1ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕಾಸರಗೋಡು ಮಂಜೇಶ್ವರ ಬಡಾಜೆ ನಿವಾಸಿ ಅಭಿಲಾಷ್ (22) ಶಿಕ್ಷೆಗೊಳಗಾದ ಅಪರಾಧಿ.

2017ರ ಅ.20ರಂದು ಬೆಳಗ್ಗೆ 6:30ಕ್ಕೆ ಅಭಿಲಾಷ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಏರ್ ಇಂಡಿಯಾ ಏಕ್ಸ್‌ಪ್ರೆಸ್‌ನಲ್ಲಿ ಬಹರೈನ್‌ಗೆ ತೆರಳಲು ಆಗಮಿಸಿದ್ದ. ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ಮತ್ತು ಏರ್‌ಇಂಡಿಯಾ ವಿಮಾನದ ಭದ್ರತಾ ಸಿಬ್ಬಂದಿ ಆತನನ್ನು ತಪಾಸಣೆ ನಡೆಸಿದಾಗ ತಿಂಡಿ ತಿನಿಸುಗಳ 4 ಪ್ಯಾಕೇಟ್‌ಗಳಲ್ಲಿ ತಲಾ 1 ಕೆ.ಜಿ. ತೂಕದ ಸುಮಾರು 80ಸಾವಿರ ರೂ. ಮೌಲ್ಯದ ಗಾಂಜಾ ವಸ್ತು ಪತ್ತೆಯಾಗಿತ್ತು.

ವಿಮಾನ ನಿಲ್ದಾಣದ ಅಸಿಸ್ಟೆಂಟ್ ಕಮಿಷನರ್ ಆ್ ಕಸ್ಟಮ್ಸ್ ಆಗಿದ್ದ ಎ.ಕೆ. ಚೌಧರಿ ಆರೋಪಿಯನ್ನು ವಶಕ್ಕೆ ಪಡೆದು ಗಾಂಜಾ ಹಾಗೂ ಇತರ ದಾಖಲೆಗಳನ್ನು ದೂರು ಸಮೇತ ಬಜಪೆ ಠಾಣೆಗೆ ಒಪ್ಪಿಸಿದ್ದರು. ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ಸಮಗ್ರ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಗೆ ಕೈಗೆತ್ತಿಕೊಂಡ ಪ್ರಧಾನ ಸತ್ರ ನ್ಯಾಯಾಲಯ ಹಾಗೂ ಮಾದಕ ದ್ರವ್ಯ ಕಾಯ್ದೆಯಡಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ 5 ವರ್ಷ ಕಠಿಣ ಶಿಕ್ಷೆ ಮತ್ತು 1ಲಕ್ಷ ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಸಾದಾ ಸಜೆ ವಿಧಿಸಿದ್ದಾರೆ.  ಈ ಪ್ರಕರಣದ ಸಾಕ್ಷಿಗಳ ವಿಚಾರಣೆಯನ್ನು ಹಿಂದಿನ ನ್ಯಾಯಾಧೀಶ ಕೆ.ಎಸ್. ಬೀಳಗಿ ನಡೆಸಿದ್ದರು.
ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News