ಎರ್ಮಾಳು ಸಮುದ್ರ ಕಿನಾರೆಯಲ್ಲಿ ಬೊಳಿಂಜಿರ್ ಸುಗ್ಗಿ

Update: 2018-09-06 14:43 GMT

ಪಡುಬಿದ್ರಿ,ಸೆ.6: ಹೆಜಮಾಡಿಯಲ್ಲಿ ಕಳೆದೆರಡು ದಿನಗಳಿಂದ ಕಡಲ ತೀರದಲ್ಲಿ ಸಾಕಷ್ಟು ಮೀನುಗಳ ಲಭ್ಯವಾಗಿದ್ದು, ಗುರುವಾರವೂ ದಡ ಸೇರುತಿದ್ದ ಮೀನುಗಳನ್ನು ಮೀನು ಪ್ರಿಯರು ಹೆಕ್ಕುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು. 

ಹೆಜಮಾಡಿ ಕೋಡಿಯ ಸಮುದ್ರ ತೀರದಾದ್ಯಂತ ಬುಧವಾರ ಹೇರಳವಾಗಿ ಬೊಳಿಂಜಿರ್ ಮೀನು ಲಭ್ಯವಾಗಿತ್ತು. ಬುಧವಾರ ಮಧ್ಯ ರಾತ್ರಿಯವರೆಗೆ ಮೀನುಗಾರಿಕೆ ನಡೆದಿತ್ತು. ಜನರು ರಾತ್ರಿಯಾದರೂ ಅಲ್ಲಿಂದ ಕದಲದೇ ಮೀನು ಹಿಡಿಯುವ ದೃಶ್ಯ ಸಾಮಾನ್ಯವಾಗಿತ್ತು. ಗುರುವಾರ ಹೆಜಮಾಡಿಯಲ್ಲಿ ಮೀನುಗಳ ಪ್ರಮಾಣ ತಗ್ಗಿದೆ. ಗುರುವಾರವೂ ಬೆಳಿಗ್ಗಿನಿಂದಲೇ ಮೂಳೂರು, ಕಾಪು, ಉಚ್ಚಿಲ ಬಡಾ, ತೆಂಕ ಎರ್ಮಾಳು, ಪಡುಬಿದ್ರಿ ಕಾಡಿಪಟ್ಣ, ನಡಿಪಟ್ಣ ಸಮುದ್ರ ತೀರದಲ್ಲಿ ಮೀನುಗಳು ದಡ ಸೇರುತ್ತಿದ್ದು, ದೂರದೂರುಗಳ ಜನ ಕರಾವಳಿ ತೀರ ಪ್ರದೇಶಗಳಿಗೆ ಆಗಮಿಸಿ ಮೀನು ಹೆಕ್ಕುತ್ತಿದ್ದ ದೃಶ್ಯ ಕಂಡು ಬಂತು. ಕೈರಂಪಣಿಗಿಳಿಯದ  ಮೂಳೂರು, ಎರ್ಮಾಳು, ಪಡುಬಿದ್ರಿಯ ಕೆಲ ಪ್ರದೇಶಗಳಲ್ಲಿಯೂ ಅಲೆಗಳ ಅಬ್ಬರದಿಂದ ಸಮುದ್ರ ತೀರಕ್ಕೆ ಬೀಳುತ್ತಿದ್ದ ಮೀನುಗಳನ್ನು ಕೈಚೀಲಗಳಲ್ಲಿ ಜನ ತುಂಬಿಸುತ್ತಿದ್ದರು. 

ಬೊಳಿಂಜಿರ್ ಮೀನು ಲಭ್ಯವಾದ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಈ ಮೀನನ್ನು ಕೇಳುವವರಿಲ್ಲ. ಇತರ ಮೀನುಗಳಿಗೂ ಬೇಡಿಕೆ ಇಲ್ಲವಾಗಿದೆ. ಸಮುದ್ರ ತೀರದಲ್ಲಿಯೇ ಮೀನು ಲಭಿಸುತ್ತಿರುವುದರಿಂದ ಜನ ಅಲ್ಲಿಯೇ ಪಡೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಕುಂಠಿತವಾಗಿದೆ ಎಂದು ಹೇಳುತ್ತಾರೆ ಪಡುಬಿದ್ರಿ ಮೀನು ಮಾರುಕಟ್ಟೆಯ ವ್ಯಾಪಾರಿ ಕಮಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News