ಹೊಂಬೆಳಕು ಬಿತ್ತಿಪತ್ರಿಕೆ ಬಿಡುಗಡೆ -ಉಪನ್ಯಾಸ ಕಾರ್ಯಕ್ರಮ

Update: 2018-09-06 15:12 GMT

ಬಂಟ್ವಾಳ, ಸೆ. 6: ಮಾನವನ ಬದುಕನ್ನು ಅರಳಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಮತ್ತು ರಂಗಭೂಮಿಯ ಸಂಪರ್ಕ ಇರುವ ಮಾನವನು ಯಾವತ್ತೂ ಏಕಾಂಗಿಯಾಗಿರಲು ಸಾಧ್ಯವಿಲ್ಲ ಎಂದು ರಂಗಕರ್ಮಿ, ಪತ್ರಕರ್ತ ಮೌನೇಶ್ ವಿಶ್ವಕರ್ಮ ಅಭಿಪ್ರಾಯಪಟ್ಟಿದ್ದಾರೆ.

ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಬುಧವಾರ ನಡೆದ ಹೊಂಬೆಳಕು ಬಿತ್ತಿಪತ್ರಿಕೆ ಬಿಡುಗಡೆಗೊಳಿಸಿ `ಸಾಹಿತ್ಯ ಮತ್ತು ರಂಗಭೂಮಿ' ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

ನಿರಂತರ ಕ್ರಿಯಾಶೀಲತೆಯನ್ನು ಹುಟ್ಟಿಸುವ ಚಿಕಿತ್ಸಕ ಗುಣ ಕಲೆ ಸಾಹಿತ್ಯಕ್ಕಿದೆ. ಸಾಹಿತ್ಯದಲ್ಲಿ ಬದುಕಿನ ನೋವು, ನಲಿವು, ಹತಾಶೆಗಳೇ ಹಾಡಾಗಿ ಬರುತ್ತವೆ. ಒಳ್ಳೆಯ ಓದು ಬರವಣಿಗೆಯ ಕಲೆಯನ್ನು ಕಲಿಸುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಬರವಣಿಗೆಯನ್ನು ರೂಢಿಸಿಕೊಳ್ಳಲು ಬಿತ್ತಿಪತ್ರಿಕೆಯು ಅವಕಾಶವಾಗಿದೆ. ವಿದ್ಯಾರ್ಥಿಗಳು ತಮ್ಮ ಭಾವನೆ, ಕನಸು, ಲಹರಿಗಳನ್ನು ಕತೆ, ಕವನ, ಲೇಖನ ಮೊದಲಾದ ರೂಪಗಳಲ್ಲಿ ಪ್ರಕಟಪಡಿಸಲು ಇದು ವೇದಿಕೆಯಾಗಿದೆ ಎಂದರು.

ವಿದ್ಯಾರ್ಥಿಗಳು ಕನಸು ಕಾಣಬೇಕು. ಕನಸುಗಳು, ಕಲ್ಪನೆಗಳು ಇಲ್ಲದ ಬಾಳ್ವೆ ಬರಡಾಗುತ್ತದೆ. ಜೀವನ ಪ್ರೀತಿ, ಕ್ರಿಯಾಶೀಲ ವ್ಯಕ್ತಿತ್ವವನ್ನು ಕಲಿಸುವ ಸಾಹಿತ್ಯ, ರಂಗಭೂಮಿಯ ಕಡೆಗೆ ವಿದ್ಯಾರ್ಥಿಗಳನ್ನು ಸೆಳೆಯುವ ಕೆಲಸ ಅಗತ್ಯವಾಗಿ ನಡೆಯಬೇಕು ಎಂದ ಅವರು, ಸಾಹಿತ್ಯ ಮತ್ತು ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯಾವತ್ತೂ ಅದು ಒಂದನ್ನು ಬಿಟ್ಟು ಇನ್ನೊಂದು ಇರುವುದಕ್ಕೆ ಸಾಧ್ಯವಿಲ್ಲ. ವಿದ್ಯಾಸಂಸ್ಥೆಗಳಲ್ಲಿ ಪಠ್ಯ ಚಟುವಟಿಕೆಯ ಜೊತೆಗೆ ಸಾಹಿತ್ಯ ಅಭಿರುಚಿಯನ್ನು ಮೂಡಿಸುವ ಪರಿಸರವಿದ್ದರೆ ಮಾತ್ರ ವಿದ್ಯಾರ್ಥಿಗಳು ಕಲೆಯ ಕಡೆಗೆ ಒಲವು ವ್ಯಕ್ತಪಡಿಸುತ್ತಾರೆ
ಎಂದರು.

ಯಾವುದೇ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಲು ಆಸಕ್ತಿ ಮುಖ್ಯ. ಕಲೆ, ಸಾಹಿತ್ಯವೆನ್ನುವುದು ಜೀವನ ವಿಧಾನವೇ ಆಗಿದೆ. ಸಾಹಿತ್ಯ ಮತ್ತು ರಂಗಭೂಮಿ ಮನುಷ್ಯನ ಬದುಕು, ವ್ಯಕ್ತಿತ್ವವನ್ನು ತಿದ್ದುವ, ರೂಪಿಸುವ ಕೆಲಸವನ್ನು ನಿರ್ವಹಿಸುತ್ತದೆ. ಮಾನವ ನಿರಂತರ ಕನಸುಗಳ ಜಗತ್ತಿನೊಳಗೆ ಬದುಕುತ್ತಿದ್ದಾನೆ. ಕನಸುಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಕನಸುಗಳೇ ಬದುಕಿನ ಜೀವದ್ರವ್ಯವಾಗಿದೆ. ಕಲೆ,ಸಾಹಿತ್ಯ ಮೊದಲಾದ ಸೃಜನಾತ್ಮಕ ಚಟುವಟಿಕೆಗಳು ಕನಸು, ಕಲ್ಪನೆಯ ಲೋಕವನ್ನು ತೆರೆಯುತ್ತವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲೆ ಡಾ.ಸುಜಾತ ಎಚ್.ಆರ್. ಶುಭಾಶಯಕೋರಿದರು. ಕನ್ನಡ ವಿಭಾಗದ ಮುಖ್ಯಸ್ಥ ಶಿವಣ್ಣ ಪ್ರಭು ಕೆ., ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಚೇತನ್ ಮುಂಡಾಜೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಭರತ್ ಪ್ರಾರ್ಥಿಸಿದರು. ಹೊಂಬೆಳಕು ಬಿತ್ತಿಪತ್ರಿಕೆಯ ವಿದ್ಯಾರ್ಥಿ ಸಂಪಾದಕಿ ವಾರುಣಿ ಎಸ್. ಐತಾಳ್ ವಂದಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಕು.ಕವಿತಾ ಕಾರ್ಯಕ್ರಮ ನಿರೂಪಿಸಿದರು. ಹೊಂಬೆಳಕು ಬಿತ್ತಿಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರು ಹಾಗೂ ಉಪನ್ಯಾಸಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News