ರಾಷ್ಟ್ರೀಯ ಪೌಷ್ಠಿಕ ಆಹಾರ ಮತ್ತು ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹ ಕಾರ್ಯಕ್ರಮ

Update: 2018-09-06 15:36 GMT

ಮೂಡುಬಿದಿರೆ,ಸೆ.7 : ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಮಂಗಳೂರು, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ), ತೆಂಕಮಿಜಾರು ಗ್ರಾ.ಪಂ. ಇವರುಗಳ ಸಹಯೋಗದಲ್ಲಿ "ರಾಷ್ಟ್ರೀಯ ಪೌಷ್ಠಿಕ ಆಹಾರ ಮತ್ತು ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಸಪ್ತಾಹದ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಬುಧವಾರ ವಿವಿಧೋದ್ದೇಶ ಸಭಾಭವನ ಸಂತೆಕಟ್ಟೆ ತೆಂಕಮಿಜಾರು ಇಲ್ಲಿ ನಡೆಸಲಾಯಿತು. 

ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಆಹಾರ ಪದಾರ್ಥಗಳನ್ನು ನಾವು ಈಗ ದಿನನಿತ್ಯದ ಆಹಾರದಲ್ಲಿ ಉಪಯೋಗಿಸಿದಾಗ ಮಾತ್ರ ಮನುಷ್ಯ ಆರೋಗ್ಯಪೂರ್ಣವಾಗಿ ಇರಲು ಸಾಧ್ಯ ಎಂದರು.
ಕ್ಷೇತ್ರ ಜನಸಂಪರ್ಕ ಇಲಾಖೆ ಭಾರತ ಸರಕಾರ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಂಗಳೂರು ಇದರ ಉಪನಿರ್ದೇಶಕ ಕೆ.ಪಿ.ರಾಜೀವನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಗರ್ಭಿಣಿ/ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಪೌಷ್ಠಿಕ ಆಹಾರದ ಬಗ್ಗೆ ಹಾಗೂ ಇಲಾಖೆಯಿಂದ ಜಾರಿಗೆ ಬಂದ ಮಾತೃಪೂರ್ಣ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. "ಆರೋಗ್ಯಕರ ಮನಸ್ಸು ಮತ್ತು ದೇಹ ಎರಡನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಪೌಷ್ಠಿಕಾಂಶಯುಕ್ತ ಆಹಾರವನ್ನು ನಾವು ಪ್ರತಿನಿತ್ಯ ಉಪಯೋಗಿಸಬೇಕು. ಇದರಿಂದ ನಾವು ಆರೋಗ್ಯಯುತವಾಗಿ ಇರಲು ಸಾಧ್ಯ" ಎಂದವರು ಹೇಳಿದರು.

ಆಳ್ವಾಸ್ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೋಷಣಾ ವಿಭಾಗದ ಪ್ರೊ. ಡಾ.ಅರ್ಚನಾ ಪ್ರಭಾತ್ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡುತ್ತಾ, ಮನುಷ್ಯ ಪ್ರತಿ ದಿನ ಕನಿಷ್ಠ 3 ಲೀಟರ್‍ನಷ್ಟು ನೀರು ಕುಡಿಯಬೇಕು. ಸೊಪ್ಪಿನ ಸೇವನೆ, ತರಕಾರಿ, ಹಣ್ಣು ಹಂಪಲುಗಳನ್ನು ನಾವು ಸೇವಿಸುವ ಆಹಾರದಲ್ಲಿ ಇರಬೇಕು. ಇದರಿಂದ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಸುಸ್ಥಿತಿಯಲ್ಲಿರಬಹುದು. ಆಹಾರ ಸೇವನೆಯ ವ್ಯತ್ಯಾಸ ಆದಲ್ಲಿ ದೇಹದಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ರಕ್ತಹೀನತೆ ತಡೆಗಟ್ಟಲು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿ ಮಂಗಳೂರು (ಗ್ರಾ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ. ಅವರು ಮಕ್ಕಳ ಸಂರಕ್ಷಣೆ, ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಪೌಷ್ಠಿಕ ಆಹಾರಗಳ ಬಗ್ಗೆ, ಅಪೌಷ್ಠಿಕತೆಯನ್ನು ತಡೆಗಟ್ಟುವ ಬಗ್ಗೆ, ಮಕ್ಕಳ ರಕ್ಷಣಾ ಕಾಯ್ದೆ, ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಹೆಣ್ಣು ಮಕ್ಕಳ ಬದುಕಿಗೆ ತೊಂದರೆಯಾದಾಗ ಯಾವ ರೀತಿಯಲ್ಲಿ ಅವರು ರಕ್ಷಣೆಯನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. 
ತೆಂಕಮಿಜಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಮುಂಡ್ಕೂರಿನ ಡಾ.ತ್ರಿವೇಣಿ ಆಚಾರ್ಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ. ಸದಸ್ಯರಾದ ರಮೇಶ್ ಶೆಟ್ಟಿ, ಕರುಣಾಕರ ಶೆಟ್ಟಿ, ಉಮಾವತಿ, ಲೋಲಾಕ್ಷಿ, ಯಶೋಧ,ಬೇಬಿ ಉಪಸ್ಥಿತರಿದ್ದರು.

ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ತಾಯಂದಿರು, ಗರ್ಭಿಣಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹಿರಿಯ/ಕಿರಿಯ ಆರೋಗ್ಯ ಸಹಾಯಕರು ಹಾಜರಿದ್ದರು.  ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಸಪ್ರಶ್ನೆಗಳನ್ನು ನಡೆಸಿ ವಿಜೇತರಿಗೆ ಬಹುಮನ ವಿತರಿಸಲಾಯಿತು.

ಒಟ್ಟು 200 ಜನ ಹಾಜರಿದ್ದ ಈ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಮಹಿಳೆಯರು ಸುಮಾರು 104 ಬಗೆಯ ಪೌಷ್ಠಿಕ ಆಹಾರವನ್ನು ತಯಾರಿಸಿ ಹಂಚಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರೋಹಿತ್ ಸ್ವಾಗತಿಸಿ, ಇಲಾಖಾ ವಲಯ ಮೇಲ್ವೀಚಾರಕಿ ಭಾರತಿ ಕಾರ್ಯಕ್ರಮ ನಿರೂಪಿಸಿ, ಪಂಚಾಯತ್ ಸಿಬ್ಬಂದಿ ರಾಕೇಶ್ ಧನ್ಯವಾದವಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News