ಶಿವರಾಮ ಕಾರಂತರು ಹಿಂದುತ್ವದ ಜೊತೆ ಬೆಳೆಸಿಕೊಂಡ ನಂಟು ನನಗೆ ಸಮಸ್ಯೆಯಾಗಿ ಕಾಡಿದೆ : ಜಿ.ರಾಜಶೇಖರ್

Update: 2018-09-06 16:31 GMT

ಮಣಿಪಾಲ, ಸೆ.6: ತಮ್ಮ ಕೃತಿಗಳಲ್ಲಿ ಹಿಂದುತ್ವ ಹಾಗೂ ಆರೆಸ್ಸೆಸ್ ಸಿದ್ಧಾಂತಗಳನ್ನು ಮತ್ತೆ ಮತ್ತೆ ವಿರೋಧಿಸುವ ಹಾಗೂ ನೇರವಾಗಿ ಮುಖಾಮುಖಿಯಾಗುವ ಡಾ.ಶಿವರಾಮ ಕಾರಂತರು, ಬದುಕಿನಲ್ಲಿ ಹಿಂದುತ್ವದ ಜೊತೆ ಬೆಳೆಸಿಕೊಂಡ ನಂಟು ನನಗೆ ಸಮಸ್ಯೆಯಾಗಿ ಕಾಡಿದೆ ಎಂದು ಖ್ಯಾತ ವಿಮರ್ಶಕ ಹಾಗೂ ಚಿಂತಕ ಜಿ.ರಾಜಶೇಖರ್ ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ) ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ಎರಡನೇ ಮಣಿಪಾಲ ಸಾಹಿತ್ಯ ಮತ್ತು ಕಲಾ ಮೇಳ ‘ಮಿಲಾಪ್-2018’ರ ಮೊದಲ ದಿನ ನಡೆದ ಕನ್ನಡದ ನಾಲ್ವರು ಆಧುನಿಕ ಬರಹಗಾರರ ಸಹಸ್ರಮಾನದ ಸಮಾಲೋಚನೆ ಯಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಕಾರಂತರ ಕುರಿತು ಅವರು ಮಾತನಾಡುತಿದ್ದರು.

ಕಾರಂತರ ರಾಜಕೀಯ ಆಸಕ್ತಿ ಡಿವಿಜಿ ಹಾಗೂ ಗೋಪಾಲಕೃಷ್ಣ ಅಡಿಗರಂತಲ್ಲ. ಅವರು ಸೃಜನಶೀಲತೆಯ ಆಚೆಗೂ ತನ್ನ ವ್ಯಕ್ತಿತ್ವವನ್ನು ರೂಪಿಸಿ ಕೊಂಡವರು. ತನ್ನನ್ನು ಆಸ್ತಿಕನೂ ಅಲ್ಲದ ನಾಸ್ತಿಕನೂ ಅಲ್ಲದ ಅನಾಸ್ತಿಕನೆಂದು ಕರೆದುಕೊಂಡ ಕಾರಂತರ ಘೋಷಿತ ರಾಜಕೀಯ ನಿಲುವಿಗೂ ಅವರ ಕಾದಂಬರಿಗಳಲ್ಲಿ ಕಾಣಿಸಿಕೊಳ್ಳುವ ರಾಜಕೀಯಕ್ಕೂ ಹೊಂದಾಣಿಕೆಯೇ ಆಗುವುದಿಲ್ಲ ಎಂದರು.

ಇದಕ್ಕಾಗಿ ರಾಜಶೇಖರ್, ಕಾರಂತರ ಅಳಿದ ಮೇಲೆ, ಮರಳಿ ಮಣ್ಣಿಗೆ ಹಾಗೂ ಚೋಮನದುಡಿಗಳನ್ನು ಉದಾಹರಣೆಯಾಗಿ ನೀಡಿ, ಅಲ್ಲಿನ ಪಾತ್ರಗಳ ಮೂಲಕ ದಾಖಲಿಸುವ ರಾಜಕೀಯ ನಿಲುವು, ಆರ್‌ಎಸ್‌ಎಸ್ ಹಾಗೂ ಇಂದಿನ ಹಿಂದುತ್ವದ ನಿಲುವಿಗೆ ಸಂಪೂರ್ಣ ತದ್ವಿರುದ್ಧದ್ದಾಗಿದೆ. ಇಂಥ ಅನೇಕ ಉದಾಹರಣೆಗಳನ್ನು ಅವರ ಕಾದಂಬರಿಗಳಿಂದ ನೀಡಬಹುದಾಗಿದೆ. ಹೀಗಾಗಿ ಕಾರಂತರ ರಾಜಕೀಯ ನಿಲುವು ಹಾಗೂ ಸೃಜನಶೀಲತೆ ನಡುವೆ ಯಾವುದೇ ಹೊಂದಾಣಿಕೆ ಇಲ್ಲ. ಸ್ವಲ್ಪ ಮಟ್ಟಿಗೆ ಇದೇ ರೀತಿಯ ನಿಲುವನ್ನು ನಾವು ಅಡಿಗರಲ್ಲೂ ಕಾಣಬಹುದು ಎಂದರು.

ಕಾರಂತರ ಕುರಿತ ತಮ್ಮ ಉಪನ್ಯಾಸಕ್ಕೆ ‘ಬಾಬ್ರಿ ಮಸೀದಿ ಅಳಿದ ಮೇಲೆ’ ಎಂದು ಶೀರ್ಷಿಕೆ ನೀಡಿದ ರಾಜಶೇಖರ್, ಇದರಲ್ಲಿ ಕಾರಂತರ ‘ಅಳಿದ ಮೇಲೆ’ ಕಾದಂಬರಿ ಹಾಗೂ ಅದೇ ಹೆಸರಿನಲ್ಲಿ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅದೇ ಕಾದಂಬರಿ ಆಧರಿಸಿ ಬರೆದ ‘ಅಳಿದ ಮೇಲೆ’ ಕಥೆಯನ್ನು ಬಾಬ್ರಿ ಮಸೀದಿ ದ್ವಂಸದ ಮೊದಲ ಮತ್ತು ನಂತರದ ರಾಜಕೀಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರಲ್ಲದೇ, ಡಿ.6ರ ಘಟನೆಯ ಹಿನ್ನೆಲೆಯಲ್ಲಿ ಅಶೀಶ್ ನಂದಿ ಮತ್ತು ತಂಡ ನೀಡಿದ ಸತ್ಯಶೋಧಕ ವರದಿ ಹಾಗೂ ಮುಂಬಯಿ ಗಲಭೆ ಕುರಿತು ನ್ಯಾ.ಶ್ರೀಕೃಷ್ಣ ಆಯೋಗ ನೀಡಿದ ವರದಿಯ ಅಂಶಗಳನ್ನು ಪ್ರಸ್ತಾಪಿಸಿದರು.

ಇದೇ ಸಂವಾದದಲ್ಲಿ ಖ್ಯಾತ ಲೇಖಕ, ಕಥೆಗಾರ ಎಸ್. ದಿವಾಕರ್ ಡಿ.ವಿ.ಗುಂಡಪ್ಪರ ಬಗ್ಗೆ, ಧಾರವಾಡದ ಕಥೆಗಾರ ರಾಘವೇಂದ್ರ ಪಾಟೀಲ್ ಅವರು ಕುವೆಂಪು ಕುರಿತು ಹಾಗೂ ಕುವೆಂಪು ವಿವಿಯ ಡಾ.ರಾಜೇಂದ್ರ ಚೆನ್ನಿ ಅವರು ದ.ರಾ.ಬೇಂದ್ರೆ ಕುರಿತು ಉಪನ್ಯಾಸಗಳನ್ನು ನೀಡಿದರು.
ಖ್ಯಾತ ವಿಮರ್ಶಕ ಟಿ.ಪಿ.ಅಶೋಕ ಅವರು ಸಂವಾದವನ್ನು ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News