ವಿಶ್ವದ ಅತಿ ಎತ್ತರದ ಮರದ ಕಟ್ಟಡ ಎಲ್ಲಿದೆ ಗೊತ್ತಾ ?

Update: 2018-09-06 16:38 GMT

ಒಸ್ಲೊ, ಸೆ.6: ನಾರ್ವೆ ದೇಶವು ವಿಶ್ವದ ಅತಿ ಎತ್ತರದ ಮರದ ಗೋಪುರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದು, ಈ ಅಪೂರ್ವ ಕಟ್ಟಡವು ಪರಿಸರ ಸ್ನೇಹಿ ಹಾಗೂ ಅಗ್ನಿನಿರೋಧಕವೆಂದು ತಜ್ಞರಿಂದ ಪ್ರಶಂಸಿಸಲ್ಪಟ್ಟಿದೆ.

ನಾರ್ವೆ ರಾಜಧಾನಿ ಒಸ್ಲೊದಿಂದ 60 ಮೈಲು ದೂರದಲ್ಲಿರುವ ಸರೋವರವೊಂದರ ಸಮೀಪ ಈ ವಿಶಿಷ್ಟ ಮರದ ಗೋಪುರ ಸ್ಥಾಪನೆಯಾಗಿದೆ.

‘ಎಂಜೊಸ್’ ಎಂದು ಹೆಸರಿನ 84.5 ಮೀಟರ್ ಎತ್ತರದ ಈ ಕಟ್ಟಡವು 18 ಅಂತಸ್ತುಗಳನ್ನು ಹೊಂದಿದೆ. ಕಾಂಕ್ರೀಟ್ ಕಟ್ಟಡಕ್ಕೆ ಹೋಲಿಸಿದರೆ, ಈ ಗೋಪುರದಿಂದ ಅಂಗಾರಾಮ್ಲ ಹೊರಸೂಸುವಿಕೆಯ ಪ್ರಮಾಣವು ತೀರಾ ಕಡಿಮೆಯೆಂದು ಪ್ರವರ್ತಕರು ತಿಳಿಸಿದ್ದಾರೆ.

ವಿಶಿಷ್ಟವಾದ ಮೇಣದ ಲೇಪನವನ್ನು ಹೊಂದಿರುವ ಈ ಮರವು ಅಗ್ನಿ ನಿರೋಧಕ ಕೂಡಾ ಆಗಿದೆ.ಈ ಕಟ್ಟಡವು ನಿರಂತರವಾಗಿ ಬೆಂಕಿಯ ಜ್ವಾಲೆಗೆ ಸಿಲುಕಿದಲ್ಲಿ, ಈ ವಿಶಿಷ್ಟ ಮೇಣವು ಹೊತ್ತಿ ಉರಿಯುತ್ತದೆಯೇ ಹೊರತು ಮರದ ಕಟ್ಟಡಕ್ಕೇನೂ ಅಪಾಯವಾಗಲಾರದು ಎಂದು ನಿರ್ಮಾಣಕಾರರು ತಿಳಿಸಿದ್ದಾರೆ. ‘ಎಂಜೊಸ್’ ಗೋಪುರದಲ್ಲಿ ವಸತಿಗೃಹಗಳ ಜೊತೆ ಈಜುಕೊಳ, ಕಚೇರಿಗಳು, ರೆಸ್ಟಾರೆಂಟ್ ಕೂಡಾ ಇರುವುದಾಗಿ ಮೂಲಗಳು ತಿಳಿಸಿವೆ.

 2019ರಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆದಿಡಲಾಗುವ ಮೊಜೋಸ್ ಗೋಪುರವು, ಪ್ರಸ್ತುತ ವಿಶ್ವದ ಅತಿ ದೊಡ್ಡ ಮರದಿಂದ ನಿರ್ಮಿತ ಕಟ್ಟಡವೆಂಬ ದಾಖಲೆಯನ್ನು ಹೊಂದಿದ್ದ 49 ಮೀಟರ್ ಎತ್ತರದ ನಾರ್ವೆಯ ಬರ್ಗೆನ್ ನಗರದಲ್ಲಿರುವ ಟ್ರೀಟ್ ಎಂಬ ಕಟ್ಟಡದ ದಾಖಲೆಯನ್ನು ಮುರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News