ರಾಷ್ಟ್ರೀಯತೆ ಪ್ರೀತಿಯ ಸೆಲೆಯಾಗಲಿ, ಬೆದರುಕೋಲಲ್ಲ: ಡಾ.ಸಿಂಗ್

Update: 2018-09-06 16:39 GMT

ಮಣಿಪಾಲ, ಸೆ.6: ರಾಷ್ಟ್ರೀಯತೆ ಎನ್ನುವುದು ಪ್ರೀತಿಯ ಸೆಲೆಯಾಗಬೇಕೇ ಹೊರತು ಬೆದರಿಸುವ ಕೋಲಾಗಬಾರದು. ಇಂದು ಅಹಂ ಇಲ್ಲದ ತಾಯ್ನಡಿನ ಪ್ರೀತಿಯ ರಾಷ್ಟ್ರೀಯವಾದದ ಅಗತ್ಯವಿದೆ ಎಂದು ಪಂಜಾಬಿನ ಖ್ಯಾತ ನಾಟಕಕಾರ, ಸಾಹಿತ್ಯ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಅತಮ್‌ಜಿತ್ ಸಿಂಗ್ ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ) ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ಎರಡನೇ ಮಣಿಪಾಲ ಸಾಹಿತ್ಯ ಮತ್ತು ಕಲಾ ಸಮ್ಮೇಳನ ‘ಮಿಲಾಪ್-2018’ನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಹಿಂಸೆಯ ಪ್ರಶ್ನೆ, ಮೌನದ ಉತ್ತರದಲ್ಲಿ ಆಯ್ಕೆ ನಿಮ್ಮದಾಗಿದೆ. ಖಡ್ಗದಿಂದ ನೆತ್ತರು ಹರಿಸುವ ಬದಲು ಲೇಖನಿಯ ಶಾಯಿ ಮೂಲಕ ಉತ್ತರ ನೀಡಬೇಕು, ಉತ್ತರ ಹುಡುಕುವ ಪ್ರಯತ್ನ ಮಾಡಬೇಕು. ಪರಂಪರೆಯ ಭದ್ರ ಪಂಚಾಂಗ ವಿಲ್ಲದೆ ಕಟ್ಟಡ ಕಟ್ಟಬಾರದು ಎಂದರು.

ಪರಂಪರೆ, ವಸುಧೈವ ಕುಟುಂಬಕಂ, ಸತ್ಯ, ಕಲ್ಯಾಣರಾಜ್ಯ, ಡಿವೈನ್ ಪವರ್ ಈ ಪಂಚತತ್ವಗಳನ್ನು ಡಾ.ಕರಣ್ ಸಿಂಗ್ ಪ್ರತಿಪಾದಿಸುತ್ತಾರೆ. ಇದೇ ನಮ್ಮ ಭವಿಷ್ಯ ಹಾಗೂ ಭ್ರಾತೃತ್ವದ ಮೂಲ. ನಮ್ಮ ಸಮಸ್ಯೆ ಇರುವುದು ಇವುಗಳನ್ನು ಜಾರಿಗೆ ತರದೇ ಇರುವುದರಲ್ಲಿ. ಇದಕ್ಕೆ ಮೊಗಲ್ ದೊರೆ ಅಕ್ಬರ್ ನಮಗೆ ಉದಾಹರಣೆಯಾಗಿದ್ದಾನೆ. ಇಲ್ಲಿನ ಅನೇಕ ಗ್ರಂಥಗಳನ್ನು ಅಕ್ಬರ್ ಪರ್ಶಿಯ ಭಾಷೆಗೆ ಭಾಷಾಂತರ ಮಾಡಿದ್ದ. ಇದರಲ್ಲಿ ಮಹಾಭಾರತವೂ ಸೇರಿದೆ. ಗೋಹತ್ಯೆ, ಸತಿಪದ್ಧತಿಯನ್ನು ನಿಷೇಧಿಸಿದ್ದ. ಅಮಾನವೀಯ ತೆರಿಗೆಯನ್ನು ರದ್ದುಗೊಳಿಸಿದ್ದ. ಎರಡೂ ಧರ್ಮಗಳ ಮೂಲಭೂತವಾದವನ್ನು ವಿರೋಧಿಸಿದ. ಅಮೃತಸರದ ಸ್ವರ್ಣ ಮಂದಿರಕ್ಕೆ ಸ್ಥಳ ಕೊಟ್ಟವನೇ ಅಕ್ಬರ್. ಇಂತಹ ಆದರ್ಶಗಳನ್ನು ನಾವು ಮರು ನಿರ್ಮಿಸಬೇಕಾಗಿದೆ ಎಂದರು.

ಕನ್ನಡದ ಖ್ಯಾತ ಕವಿ ಹಾಗೂ ಸಾಹಿತಿ ಡಾ.ಎಚ್.ಎಸ್.ಶಿವಪ್ರಕಾಶ್ ದಿಕ್ಸೂಚಿ ಭಾಷಣ ಮಾಡಿ ಆಧುನಿಕತೆ ಹಾಗೂ ಸಂಪ್ರದಾಯಗಳ ಕುರಿತು ಮಾತನಾಡಿದರು. ಇಂದು ದೇಶದ ಬೇರೆ ಬೇರೆ ಭಾಷೆಗಳ ನಡುವೆ ಸೇತು ನಿರ್ಮಿಸುವ ಪ್ರಯತ್ನ ನಡೆಯಬೇಕು. ಜ್ಞಾನದಲ್ಲಿ ಹಿರಿಯ, ಕಿರಿಯ ಭೇದ ಸಲ್ಲದು ಎಂದರು.

ಮಾಹೆಯ ಕುಲಪತಿ ಡಾ. ಎಚ್.ವಿನೋದ ಭಟ್ ಅವರು ತಮ್ಮ ವಿವಿ ಯಲ್ಲಿ ಕಲೆ, ಸಾಹಿತ್ಯ ಚಟುವಟಿಕೆಗಳಿಗೂ ಅವಕಾಶ ನೀಡುತ್ತಿರುವುದಕ್ಕೆ ಮಿಲಾಪ್-2018 ಸಮ್ಮೇಳನ ಸಾಕ್ಷಿ ಎಂದರು.

ಸಮ್ಮೇಳನದ ಸಂಚಾಲಕಿ ಡಾ.ನೀತಾ ಇನಾಂದಾರ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಮಣಿಪಾಲ್ ಯುನಿವರ್ಸಲ್ ಪ್ರೆಸ್ ಮುದ್ರಿಸಿದ ರಂಗಕರ್ಮಿ, ಹೆಗ್ಗೋಡು ನಿನಾಸಂನ ಕೆ.ವಿ.ಅಕ್ಷರ ಅವರ ಕೃತಿ ‘ಕನ್ನಡದ ರಂಗಭೂಮಿ ಇತಿಹಾಸ 1850-1950’ ಹಾಗೂ ಮೈತ್ರೇಯಿ ಕರ್ನೂರ್ ಇಂಗ್ಲೀಷ್‌ಗೆ ಅನುವಾದಿಸಿದ ಶ್ರೀನಿವಾಸ ವೈದ್ಯರ ಅವರ ಕನ್ನಡ ಕಾದಂಬರಿ ‘ಹಳ್ಳ ಬಂತು ಹಳ್ಳ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಸಮ್ಮೇಳನ ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News