ಉಡುಪಿ: ವಿಶ್ವ ಬಂಟರ ಸಮ್ಮಿಲನ - 2018ಕ್ಕೆ ಭರದ ಸಿದ್ಧತೆ

Update: 2018-09-06 16:54 GMT

ಉಡುಪಿ, ಸೆ.6: ಜಾಗತಿಕ ಬಂಟರ ಸಂಘಗಳ ಒಕ್ಕೂಟ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಸ್ತ ಬಂಟರ ಸಂಘಗಳ ಸಹಯೋಗದಲ್ಲಿ ಸೆ.9 ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿ ರುವ ವಿಶ್ವ ಬಂಟರ ಸಮ್ಮಿಲನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಸುಮಾರು 20ರಿಂದ 25 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಮ್ಮಿಲನವನ್ನು ಬೆಳಗ್ಗೆ 9ಗಂಟೆಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ ಉದ್ಘಾಟಿಸಲಿರುವರು. ಶ್ರೀಸಂತೋಷ್ ಗುರೂಜಿ, ಶ್ರೀಒಡಿಯೂರು ಗುರುದೇವಾನಂದ ಸ್ವಾಮೀಜಿ, ವದ್ರದೇಹಿ ಮಠದ ಶ್ರೀರಾಜ ಶೇಖರಾನಂದ, ಕೆಮಾರು ಶ್ರೀಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿರುವರು ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ವಿಶೇಷವಾಗಿ ಬಾಲಿವುಡ್, ಸ್ಯಾಂಡಲ್‌ವುಡ್, ಕೋಸ್ಟಲ್‌ವುಡ್‌ನ ಬಂಟ ಸಮುದಾಯದ ನಟ, ನಟಿಯರಾದ ಸುನೀಲ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರೋಹಿತ್ ಶೆಟ್ಟಿ, ಶ್ರೀನಿಧಿ ಶೆಟ್ಟಿ ಮೊದಲಾದವರು ಪಾಲ್ಗೊಳ್ಳಲಿರುವರು. ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ನಡೆಯುವ ಈ ಸಮ್ಮಿಲನದಲ್ಲಿ ವಿವಿಧ ಕಾರ್ಯಕ್ರಮಗಳು ಜರಗಲಿದೆ. ಸುಮಾರು 75 ಮಂದಿ ದೈವಸ್ಥಾನ, ದೇವಸ್ಥಾನ ಹಾಗೂ ಗಡಿಗುರಿಕಾರರನ್ನು ಗೌರವಿಸಲಾಗುವುದು. ಸುಮಾರು 1500 ಉಡುಪಿ ಜಿಲ್ಲೆಯ ಬಂಟ ಸಮುದಾಯದ ಸ್ವಯಂ ಸೇವಕರು ಈ ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದ್ದಾರೆ ಎಂದರು.

400-500 ವರ್ಷಗಳ ಹಳೆಯದಾದ ಬಂಟಗುತ್ತುಗಳ ಮನೆಯ ವಿನ್ಯಾಸ ದಲ್ಲಿ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ. ತೀರ್ಥಹಳ್ಳಿಯ ತೀರ್ಥಮಂಟಪದ ಮಾದರಿಯಲ್ಲಿ ಮಂಟಪದ ವಿನ್ಯಾಸ ಮಾಡಲಾಗುವುದು. ಸಾಯಿರಾಧ ಸಮೂಹ ಸಂಸ್ಥೆಯ ಮನೋಹರ್ ಶೆಟ್ಟಿ ನೇತೃತ್ವದಲ್ಲಿ, ಡಾ.ಗೋಪಾಲ ಆಚಾರ್ ತಂಡದಿಂದ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

ಬೀಡಿನಗುಡ್ಡೆ ಮೈದಾನ, ಮಿಶನ್ ಕಂಪೌಂಡ್‌ನಲ್ಲಿರುವ ಕ್ರಿಶ್ಚಿಯನ್ ಪಿಯು ಕಾಲೇಜಿನ ಮೈದಾನ, ಬಾಶೆಲ್ ಮಿಷನರಿ ಚರ್ಚ್ ಹೌಲ್, ಬೈಲೂರು ರೋಹಿತ್ ಶೆಟ್ಟಿ ಕೌಂಪೌಂಡ್, ಕಲ್ಸಂಕ ರಾಯಲ್ ಗಾರ್ಡನ್‌ಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಬೈಕ್ ಪಾರ್ಕಿಂಗ್‌ಗೆ ಪಿಪಿಸಿ ರಸ್ತೆಯ ಸತೀಶ್ಚಂದ್ರ ಹೆಗ್ಡೆಯವರ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ, ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಲಹೆಗಾರ ಕರ್ನಿರೆ ವಿಶ್ವನಾಥ್ ಶೆಟ್ಟಿ, ಮೋಹನ್ ಶೆಟ್ಟಿ ಮೂಡನಿಡಂಬೂರು, ಮನೋಹರ್ ಶೆಟ್ಟಿ ತೋನ್ಸೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News