ನಕಲಿ ಇನ್ವೋಟರ್ ಬ್ಯಾಟರಿ ಮಾರಾಟ: ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಆದೇಶ

Update: 2018-09-06 16:56 GMT

ಉಡುಪಿ, ಸೆ.6: ನಕಲಿ ಇನ್ವೋಟರ್ ಹಾಗೂ ಬ್ಯಾಟರಿ ಮಾರಾಟ, ಕಡಿಮೆ ದರದ ಬ್ಯಾಟರಿಗೆ ಹೆಚ್ಚಿನ ಹಣ ವಸೂಲಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಖಾರ್ವಿಕೇರಿ ರಸ್ತೆಯ ಕೊತ್ವಾಲ್ ಟ್ರೇಡರ್ಸ್‌ ಮಾಲಕ ಕೆ.ಅರವಿಂದ ಕೊತ್ವಾಲ್ ವಿರುದ್ಧ ಉಡುಪಿ ಗ್ರಾಹಕ ನ್ಯಾಯಾಲಯವು ಆ.30ರಂದು ತೀರ್ಪು ನೀಡಿದೆ.

ಕುಂದಾಪುರ ಶಾಸ್ತ್ರೀ ಸರ್ಕಲ್‌ನ ಪ್ರಕಾಶ್ ಎಂಬವರ ಪತ್ನಿ ಶಾರದಾ ಪಿ. ಎಂಬವರು ಕೋತ್ವಾಲ್ ಟ್ರೇಡರ್ಸ್‌ನಿಂದ 23ಸಾವಿರ ರೂ.ಗೆ ಇನ್ವೋಟರ್ ಹಾಗೂ ಬ್ಯಾಟರಿ ಖರೀದಿಸಿದ್ದರು. ಅರವಿಂದ ಕೊತ್ವಾಲ್ ‘ಉಷ’ ಬದಲು ‘ಉಷಾ’ ಎಂಬ ನಕಲಿ ಕಂಪೆನಿಯ ಇನ್ವೋಟರ್ ಹಾಗೂ ಬ್ಯಾಟರಿಯನ್ನು ನೀಡಿದ್ದರು. ಈ ಬಗ್ಗೆ ಶಾರದಾ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆದರೂ ಅರವಿಂದ ಕೋತ್ವಾಲ್ ಇನ್ವೋಟರ್ ಹಾಗೂ ಬ್ಯಾಟರಿಯನ್ನು ಬದಲಾಯಿಸಿ ಕೊಡದ ಹಿನ್ನೆಲೆಯಲ್ಲಿ ಪೊಲೀಸರು ಕೋರ್ಟ್‌ನಲ್ಲಿ ಬಗೆಹರಿಸುವಂತೆ ಹಿಂಬರಹ ನೀಡಿದ್ದರು. ಅದರಂತೆ ಶಾರದಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು.

ವಿಚಾರಣೆ ನಡೆಸಿದ ನ್ಯಾಯಾಲಯದ ಏಕ ಪೀಠದ ಅಧ್ಯಕ್ಷೆ ಶೋಭಾ ಸಿ.ವಿ., ಸದಸ್ಯೆ ಶಾರದಮ್ಮ ಎಚ್.ಜಿ., ಶಾರದಾ ಅವರಿಗೆ ಅಸಲು ಬಿಲ್ಲಿನ ಹಣ 23 ಸಾವಿರ ರೂ., 5000ರೂ. ಪರಿಹಾರ, 5000ರೂ. ನ್ಯಾಯಾಲಯದ ಖರ್ಚು ಹಾಗೂ ಶೇ.6.5 ಬಡ್ಡಿ ನೀಡುವಂತೆ ಅರವಿಂದ ಕೋತ್ವಾಲ್ ಅವರಿಗೆ ಆದೇಶ ನೀಡಿದರು. ಗ್ರಾಹಕರ ಪರವಾಗಿ ನ್ಯಾಯವಾದಿ ಶಿರಿಯಾರ ಪ್ರಭಾಕರ ನಾಯಕ್ ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News