ಮೂಡಬಿದಿರೆ ಗೇರು ಅಭಿವೃದ್ಧಿ ನಿಗಮದಿಂದ ಗೇರು ಕೃಷಿ ಮಾಹಿತಿ ಕಾರ್ಯಾಗಾರ

Update: 2018-09-06 17:29 GMT

ಮೂಡುಬಿದಿರೆ: ಕರ್ನಾಟಕ ಗೇರು ಅಭಿವೃದ್ಧಿ ನಿಗಮ ವತಿಯಿಂದ ಇಲ್ಲಿನ ಅರಣ್ಯ ಸಂಕೀರ್ಣದಲ್ಲಿರುವ ಅರಣ್ಯ ಇಲಾಖೆಯ ಪ್ರಕೃತಿ ಚಿಕಿತ್ಸಾ ತರಬೇತಿ ಕೇಂದ್ರದಲ್ಲಿ 'ರೈತರಿಗೆ ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಗೇರು ಕೃಷಿ ಮಾಹಿತಿ' ಕಾರ್ಯಗಾರವು ಬುಧವಾರ ನಡೆಯಿತು.

ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಉದ್ಘಾಟಿಸಿ ಶುಭ ಹಾರೈಸಿದರು.  ಪ್ರಗತಿಪರ ಗೇರು ಕೃಷಿಕ ಹಾಗೂ ಮಾಜಿ ಸೈನಿಕ ಜಯ ಶೆಟ್ಟಿ ಬೆಳುವಾಯಿ ಇವರನ್ನು ನಿಗಮದ ವತಿಯಿಂದ ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಎಸ್ ನೆಟಾಲ್ಕರ್ ಸಾಂಕೇತಿಕವಾಗಿ ಪ್ರಗತಿಪರ ರೈತರಿಗೆ ಕಸಿಗೇರು ಗಿಡಗಳನ್ನು ವಿತರಿಸಿ ಮಾತನಾಡಿ ಗೇರು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮುತುವರ್ಜಿಸಿ ವಹಿಸಿ ಬೆಳೆಸಿದಲ್ಲಿ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಸಾಧ್ಯ. ಆಸಕ್ತ ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ಗೇರು ಕೃಷಿಕರಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಇನ್ನಿತರ ರಾಜ್ಯಗಳಿಗೆ ಗೇರು ಕೃಷಿಯ ಮಾಹಿತಿ ಹಾಗೂ ನೆಡುತೋಪು ವೀಕ್ಷಣೆಗೆ ಕರೆದೊಯ್ಯುವ ಸಾಧ್ಯತೆಗಳ ಬಗ್ಗೆ ತಿಳಿಸಿದರು. ನಿಗಮದ ನರ್ಸರಿಗಳಲ್ಲಿ ಉತ್ತಮ ತಳಿಯ ಕಸಿ ಗೇರು ಗಿಡಬೆಳೆಸಿ, ಸಾರ್ವಜನಿಕರಿಗೆ ಪೂರೈಸುವುದಾಗಿಯೂ ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ  ನಿರ್ದೇಶಕ ಡಾ. ಯಂ ಗಂಗಾಧರ ನಾಯಕ್,  ಗೇರು ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಗೇರು ತಳಿಗಳ ಬಗ್ಗೆ ಮತ್ತು ಯಾವ ಮಣ್ಣಿಗೆ ಯಾವ ತಳಿ ಸೂಕ್ತ ಎಂದು ಅವರು ವಿವರಿಸಿದರು. ಬೇಗ ಹೂ ಬಿಡುವ, ಮಧ್ಯಮ ಕಾಲದಲ್ಲಿ ಹಾಗೂ ತಡವಾಗಿ ಹೂ ಬಿಡುವ ತಳಿಗಳ ಬೆಳೆಯ ಬಗ್ಗೆ, ನೆಡುತೋಪುಗಳಲ್ಲಿ ಕಳೆ ಗಿಡಗಳನ್ನು ಕಡಿದು, ಕಾಲ ಕಾಲಕ್ಕೆ ಗೊಬ್ಬರವನ್ನು ನೀಡಿ, ನೆಡುತೋಪುಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡುವ ಬಗ್ಗೆ ಕೂಡಾ ಮಾಹಿತಿ ನೀಡಿದರು. 

ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಮುರಳೀಧರ್ ಗೇರು ಮರಗಳಿಗೆ ಬರುವ ವಿವಿಧ ಕೀಟಗಳ ಹಾವಳಿ ಮತ್ತು ಅವುಗಳ ನಿಯಂತ್ರಣ ಬಗ್ಗೆ ಮಾಹಿತಿಯನ್ನು ನೀಡಿದರು. ಗೇರು ಕೃಷಿಕರೊಂದಿಗೆ ಸಂವಾದ ನಡೆಯಿತು.

ಕುಮುಟಾ ವಿಭಾಗದ ನೆಡುತೋಪು ಅಧೀಕ್ಷಕ ಮಲ್ಲಪ್ಪ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಪುತ್ತೂರು ಗೇರು ಸಂಶೋಧನಾ ನಿರ್ದೇಶಕ ಡಾ. ಯಂ ಗಂಗಾಧರ ನಾಯಕ್,  ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕುಂದಾಪುರ ವಿಭಾಗದ ನೆಡುತೋಪು ಅಧೀಕ್ಷಕ ರವಿರಾಜ್ ಸ್ವಾಗತಿಸಿದರು. ಮೂಡುಬಿದಿರೆ ನೆಡುತೋಪು ವಿಭಾಗದ ಅಧೀಕ್ಷಕ ಮುರಳಿಧರನ್ ಉಪಸ್ಥಿತರಿದ್ದರು. ಪುತ್ತೂರು ವಿಭಾಗದ ನೆಡುತೋಪು ಅಧೀಕ್ಷಕ ಸುರೇಶ್ ಸನ್ಮಾನ ಪತ್ರವನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 150 ಮಂದಿ ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ಗೇರು ಕೃಷಿಕರಿಗೆ ಕಸಿ ಗೇರು ಗಿಡಗಳನ್ನು ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ಗೇರು ಕೃಷಿಕರಿಗೆ ಉಚಿತವಾಗಿ ವಿತರಿಸಲಾಯಿತು.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News