ಪಂಜಾಬ್ ವಿವಿ ಚುನಾವಣೆ: ಇತಿಹಾಸದಲ್ಲೇ ಮೊದಲ ಬಾರಿ ಅಧ್ಯಕ್ಷೆಯಾಗಿ ವಿದ್ಯಾರ್ಥಿನಿ ಆಯ್ಕೆ

Update: 2018-09-07 12:37 GMT

ಅಮೃತಸರ್, ಸೆ.7: ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ಗೆ ನಡೆದ ಚುನಾವಣೆಯಲ್ಲಿ, 1947ರಲ್ಲಿ ಸ್ಥಾಪಿತವಾದ ಈ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿನಿಯೊಬ್ಬರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯ  ಅಭ್ಯರ್ಥಿಯನ್ನು ಸೋಲಿಸಿ 22 ವರ್ಷದ ವಿದ್ಯಾರ್ಥಿ ನಾಯಕಿ ಕಾನುಪ್ರಿಯಾ ಅವರು 719 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಯಾವುದೇ ರಾಜಕೀಯ ನಂಟು ಹೊಂದಿರದ ಎಡಪಂಥೀಯ  ಸಂಘಟನೆ ಸ್ಟೂಡೆಂಟ್ಸ್ ಫಾರ್ ಸೊಸೈಟಿಯ ನಾಯಕಿಯಾಗಿರುವ ಕಾನುಪ್ರಿಯಾ ಅವರು ಪ್ರಾಣಿಶಾಸ್ತ್ರ ವಿಷಯದಲ್ಲಿ ಸ್ನಾತ್ತಕೋತ್ತರ ವಿದ್ಯಾರ್ಥಿನಿಯಾಗಿದ್ದಾರೆ.

``ಈ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಸೇರಿದೆ, ಬಿಜೆಪಿ, ಕಾಂಗ್ರೆಸ್ ಅಥವಾ ಅಕಾಲಿದಳಕ್ಕೆ ಸೇರಿಲ್ಲ,'' ಎಂದು ವಿಜಯಿಯಾದ ನಂತರ ಹೇಳಿದ ಕಾನುಪ್ರಿಯಾ ತಾನು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುವ ಭರವಸೆ ನೀಡಿದ್ದಾರೆ.

ಕಾನುಪ್ರಿಯಾರ ಸಂಘಟನೆ ಸ್ಟೂಡೆಂಟ್ಸ್ ಫಾರ್ ಸೊಸೈಟಿ ಒಟ್ಟು 2,802 ಮತಗಳನ್ನು ಪಡೆದರೆ ಎಬಿವಿಪಿಗೆ 2,083 ಮತಗಳು ದೊರಕಿದ್ದವು.  ಸ್ಟೂಡೆಂಟ್ಸ್ ಆರ್ಗನೈಸೇಶನ್  ಆಫ್ ಇಂಡಿಯಾಗೆ 1997 ಮತಗಳು ಎನ್‍ಎಸ್‍ಯುಐಗೆ 1583 ಮತಗಳು ದೊರಕಿದ್ದರೆ 209 ನೋಟಾ ಮತಗಳೂ ಬಿದ್ದಿದ್ದವು.

ಉಪಾಧ್ಯಕ್ಷ ಹುದ್ದೆ  ಐಎಸ್‍ಎ ಸಂಘಟನೆಯ ದಲೇರ್ ಸಿಂಗ್ ಗೆ  ಹೋದರೆ,  ಐಎನ್‍ಸಿಒ ಸಂಘಟನೆಯ ಅಮರೀಂದರ್ ಸಿಂಗ್ ಹಾಗೂ ಎನ್‍ಎಸ್ ಯುಐ  ಸಂಘಟನೆಯ ವಿಪುಲ ಅತ್ರಯ್ ಕ್ರಮವಾಗಿ ಕಾರ್ಯದ್ರ್ರ ಹಾಗೂ ಜತೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

2010ರಲ್ಲಿ ಸ್ಥಾಪಿತವಾದ ದಿ ಸ್ಟೂಟೆಂಟ್ಸ್ ಸೊಸೈಟಿ ಆಫ್ ಇಂಡಿಯಾ ಇಲ್ಲಿಯ ತನಕ ಅಧ್ಯಕ್ಷ ಹುದ್ದೆಗೆ ನಾಲ್ಕು ಬಾರಿ ಸ್ಪರ್ಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News