ಮೆಹುಲ್ ಚೋಕ್ಸಿ ಪ್ರಕರಣ: ರೆಡ್ ಕಾರ್ನರ್ ನೋಟಿಸ್ ಬಗ್ಗೆ ನಿರ್ಧರಿಸಲಿರುವ ಇಂಟರ್‌ಪೋಲ್

Update: 2018-09-07 12:47 GMT

ಹೊಸದಿಲ್ಲಿ, ಸೆ.7: ದೇಶಭ್ರಷ್ಟ ವಜ್ರಾಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಭಾರತೀಯ ತನಿಖಾ ಸಂಸ್ಥೆಗಳು ಪ್ರಬಲ ಆರೋಪ ಮಾಡಿರುವ ಕಾರಣ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಬೇಕೆಂಬ ಭಾರತದ ಮನವಿಯ ಬಗ್ಗೆ ಇಂಟರ್‌ಪೋಲ್‌ನ ಆಂತರಿಕ ಸಮಿತಿ ಅಕ್ಟೋಬರ್‌ನಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ರಾಜಕೀಯ ಸಂಚಿನ ಭಾಗವಾಗಿ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಚೋಕ್ಸಿ ಆರೋಪಿಸಿದ್ದ ಕಾರಣ ಇಂಟರ್‌ಪೋಲ್, ಚೋಕ್ಸಿ ವಿರುದ್ಧ ಭಾರತ ಮಾಡಿದ ರೆಡ್ ಕಾರ್ನರ್ ನೋಟಿಸ್ ಮನವಿಯನ್ನು ತಡೆಹಿಡಿದಿತ್ತು.

ಭಾರತದ ಜೈಲುಗಳು ಮತ್ತು ತನ್ನ ವೈಯಕ್ತಿಕ ಭದ್ರತೆಯ ಬಗ್ಗೆಯೂ ಚೋಕ್ಸಿ ಪ್ರಶ್ನೆಯೆತ್ತಿದ್ದರು. ಚೋಕ್ಸಿ ಹೇಳಿಕೆಗೆ ಸಿಬಿಐ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿತ್ತು. ಇದೀಗ ಚೆಂಡು ಇಂಟರ್‌ಪೋಲ್‌ನ ಐದು ಸದಸ್ಯರ ಸಮಿತಿಯ ನ್ಯಾಯಾಲಯದ ಅಂಗಳದಲ್ಲಿದ್ದು ಮುಂದಿನ ತಿಂಗಳು ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ರೆಡ್ ಕಾರ್ನರ್ ನೋಟಿಸ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಹುಲ್ ಚೋಕ್ಸಿ, ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ ನಡೆದ 13,000 ಕೋಟಿ ರೂ. ಮೊತ್ತದ ಭಾರತದ ಅತೀದೊಡ್ಡ ಹಗರಣದ ಹಿಂದಿನ ಮಾಸ್ಟರ್‌ಮೈಂಡ್ ಎಂದು ಸಿಬಿಐ ಆರೋಪಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಕ್ಸಿಯ ಅಳಿಯ ನೀರವ್ ಮೋದಿ ವಿರುದ್ಧ ಇಂಟರ್‌ಪೋಲ್ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ ಮತ್ತು ಆತ ಇಂಗ್ಲೆಂಡ್‌ನಲ್ಲಿ ಇರುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News