ತೆಲಂಗಾಣ ವಿಧಾನಸಭೆ ವಿಸರ್ಜನೆಯ ಕೆಸಿಆರ್ ನಿರ್ಧಾರ ವಿವೇಚನಾರಹಿತ: ಮುಖ್ಯ ಚುನಾವಣಾ ಆಯುಕ್ತ ರಾವತ್

Update: 2018-09-07 13:04 GMT

ಹೈದರಾಬಾದ್,ಸೆ.7: ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅವರ ಟಿಆರ್‌ಎಸ್ ಪಕ್ಷವು ಅವಧಿಗೆ ಮುನ್ನವೇ ವಿಧಾನಸಭಾ ಚುನಾವಣೆಗೆ ಒತ್ತಡ ಹೇರುತ್ತಿರುವ ಬಗ್ಗೆ ಚುನಾವಣಾ ಆಯೋಗವು ಅಸಮಾಧಾನವನ್ನು ವ್ಯಕ್ತಪಡಿಸಿದೆ. ಅವಧಿಗೆ ಮುನ್ನವೇ ಚುನಾವಣೆಯನ್ನು ನಡೆಸಲು ಸಾಧ್ಯವಾಗುವಂತೆ ನಿಗದಿತ ಅವಧಿಗೆ ಎಂಟು ತಿಂಗಳು ಮೊದಲೇ ವಿಧಾನಸಭೆಯನ್ನು ವಿಸರ್ಜಿಸಲು ಕೆಸಿಆರ್ ಶಿಫಾರಸು ಮಾಡಿದ್ದು,ರಾಜ್ಯಪಾಲರು ಅದನ್ನು ಅಂಗೀಕರಿಸಿದ್ದಾರೆ.

ಚುನಾವಣೆಗಳ ಕುರಿತು ಕೆಸಿಆರ್ ಹೇಳಿಕೆಗಳು ವಿವೇಚನಾರಹಿತ ಮತ್ತು ಅನಗತ್ಯವಾಗಿವೆ ಎಂದು ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಒ.ಪಿ.ರಾವತ್ ಹೇಳಿದರು. ಚುನಾವಣೆಯನ್ನು ಶೀಘ್ರವೇ ನಡೆಸುವಂತೆ ಮತ್ತು ವಿಳಂಬವನ್ನು ಮಾಡದಂತೆ ಸರ್ವೋಚ್ಚ ನ್ಯಾಯಾಲಯವು ಆಯೋಗಕ್ಕೆ ಆದೇಶಿಸಿದೆ. ಉಸ್ತುವಾರಿ ಸರಕಾರವು ಚುನಾವಣೆಗಳಲ್ಲಿ ವಿಳಂಬದ ಅವಕಾಶವನ್ನು ಬಳಸಿಕೊಳ್ಳಲು ನಾವು ಅವಕಾಶ ನೀಡುವಂತಿಲ್ಲ ಎಂದು ಅವರು ತಿಳಿಸಿದರು.

ತೆಲಂಗಾಣದಲ್ಲಿ ಅವಧಿಗೆ ಮುನ್ನವೇ ಚುನಾವಣೆಗೆ ತೆರಳುವ ಕೆಸಿಆರ್ ನಡೆಯನ್ನು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ನಿಗದಿಯಂತೆ ಚುನಾವಣೆ 2019,ಜೂನ್‌ನಲ್ಲಿ ನಡೆಯಬೇಕಾಗಿದ್ದರೂ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಕಾಂಗ್ರೆಸ್ ಬದಲು ತನ್ನ ಪಾತ್ರ ಮತ್ತು ತನ್ನ ಸರಕಾರದ ಸಾಧನೆಗಳು ಕೇಂದ್ರ ಬಿಂದುವಾಗಿರಬೇಕೆಂದು ಕೆಸಿಆರ್ ಬಯಸಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News