×
Ad

ಫೇಸ್‌ಬುಕ್‌ ಪೋಸ್ಟ್ ಹಾಕಿದ್ದಕ್ಕೆ ಜೈಲಿಗೆ ತಳ್ಳಿದ ಪ್ರಕರಣ : ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ ಅಶ್ರಫ್

Update: 2018-09-07 19:20 IST

ಮಂಗಳೂರು, ಸೆ.7: ಫೇಸ್‌ಬುಕ್‌ ಪೋಸ್ಟ್ ಹಾಕಿದ ಕಾರಣ ಬಂಧನಕ್ಕೊಳಗಾಗಿದ್ದ ಅಶ್ರಫ್ ಅವರು ತನಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

"ಫೇಸ್‌ಬುಕ್‌ನಲ್ಲಿ ನಾನು ಮೂಢನಂಬಿಕೆ ಪ್ರಶ್ನಿಸಿ ಹಾಕಿದ ಸಾಮಾನ್ಯ ಬರಹವೊಂದರ ಆಧಾರದಲ್ಲಿ ಪೊಲೀಸರು ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿ, ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿತ್ತು. ನನ್ನ ಮೇಲೆ ಸುಳ್ಳು ಮೊಕದ್ದಮೆ ಹೂಡಲಾಗಿದೆ. ನಾನು ಸ್ನಾತಕೋತ್ತರ ಪದವೀಧರ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸಕ್ರಿಯನಾಗಿದ್ದು, ಸಮಾಜದ ಆಗುಹೋಗುಗಳಿಗೆ ಪ್ರತಿಕ್ರಿಯಿಸುತ್ತಿರುತ್ತೇನೆ" ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಕೇರಳದಲ್ಲಿ ನೆರೆ ಬಂದ ಸಂದರ್ಭ ‘ಕೇರಳದ ನೆರೆಗೆ ಋತುಮತಿಯಾದ ಹೆಣ್ಣು ಮಕ್ಕಳನ್ನು ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಲು ನ್ಯಾಯಾಲಯ ಅನುಮತಿ ನೀಡಿದ್ದು ಕಾರಣ’ ಎಂದು ಕೆಲವರು ಪ್ರಚಾರ ಮಾಡಿದ್ದರು. ಇದು ಮೂಢನಂಬಿಕೆ ಹರಡುವ ಯತ್ನ ಹಾಗೂ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿತ್ತು. ಇಂತಹ ಮೂಢನಂಬಿಕೆ ಪ್ರಚಾರದ ವಿರುದ್ಧ, ಸಂವಿಧಾನದ ಆಶಯಕ್ಕೆ ಬದ್ಧನಾಗಿ ಫೇಸ್‌ಬುಕ್‌ನಲ್ಲಿ, ‘ಹಾಗಾದರೆ ಪರಶುರಾಮನ ಸೃಷ್ಟಿಯಾದ ಮಂಗಳೂರಿನಲ್ಲಿ ನೆರೆ ಬರಲು ಕಾರಣವೇನು’ ಎಂದು ಪ್ರಶ್ನಿಸಿದ್ದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

"ಇಂತಹ ಸಾಮಾನ್ಯ, ಕಾನೂನಿಗೆ ವಿರುದ್ಧವಲ್ಲದ ಪೋಸ್ಟ್ ಹಾಕಿದ ತನ್ನ ಮೇಲೆ ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಣೆಯಿಂದ ಸೆಕ್ಷನ್ 153, 505, 507 ಅಡಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಅಲ್ಲದೆ, ಸಿಸಿಬಿ ಪೊಲೀಸರು ತನ್ನ ಜೊತೆ ಸೆ.21ರಂದು ಮಾತನಾಡಲೆಂದು ಉಪಾಯವಾಗಿ ಕರೆದು ಮಾನಸಿಕ ಹಿಂಸೆ ನೀಡಿ, ಸಿಸಿಬಿ ಠಾಣೆಯಲ್ಲಿ ಕೂಡಿ ಹಾಕಿದ್ದರು. ನಂತರ ಬಂದರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು. ಅಲ್ಲಿ ನನಗೆ ಹಿಂಸೆ ನೀಡಿದ್ದಲ್ಲದೆ ರಾತ್ರಿ ಸೇರಿದಂತೆ 24 ಗಂಟೆಗೂ ಹೆಚ್ಚು ಅವಧಿ ಬರಿ ಮೈಯಲ್ಲಿ ಲಾಕಪ್‌ನಲ್ಲಿ ಕೂಡಿ ಹಾಕಿದ್ದರು. ಆನಂತರ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಸತ್ಯ ಹೇಳಬಾರದು ಎಂದು ಬೆದರಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ನನಗೆ ನ್ಯಾಯಾಂಗ ಬಂಧನ ವಿಧಿಸಿದ ಕಾರಣ ಆರು ದಿನ ಜೈಲಿನಲ್ಲಿ ಇರುವಂತಾಯಿತು. ಜೈಲಿನ ಸಿಬ್ಬಂದಿ ನನ್ನ ಪರ್ಸ್, ನಗದು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ" ಎಂದು ಮನವಿಯಲ್ಲಿ ಅಶ್ರಫ್ ಆರೋಪಿಸಿದ್ದಾರೆ.

"ಜಾಮೀನು ಬಿಡುಗಡೆಯಾದ ನಂತರ ನಾನು ಡಿವೈಎಫ್‌ಐ ಸಂಘಟನೆಯರಲ್ಲಿ ನನಗಾದ ಅನ್ಯಾಯವನ್ಬು ಹೇಳಿಕೊಂಡಿದ್ದೆ ಹಾಗೂ ಫೇಸ್‌ಬುಕ್‌ನಲ್ಲಿ ವಿಷಯವನ್ನು ಬರೆದಿದ್ದೆ. ಅದಕ್ಕಾಗಿ ಮತ್ತೊಮ್ಮೆ ಬಂದರು ಠಾಣೆಯ ನಿರೀಕ್ಷಕರಾದ ಸುರೇಶ್‌ಕುಮಾರ್ ನೋಟಿಸ್ ನೀಡಿದ್ದು, ಜಾಮೀನು ರದ್ದುಗೊಳಿಸಲು ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಾಗಿ ಬೆದರಿಸಿದ್ದಾರೆ. ನನ್ನಲ್ಲಿ ಬಲವಂತವಾಗಿ ತಪ್ಪೊಪ್ಪಿಗೆ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಇನ್ನು ಮೇಲೆ ಫೇಸ್‌ಬುಕ್‌ನಲ್ಲಿ ಏನೂ ಬರೆಯಬಾರದಾಗಿ ಬೆದರಿಸಿರುವುದಾಗಿ" ಅವರು ಮನವಿಯಲ್ಲಿ ತಿಳಿಸಿದ್ದಾರೆ.

"ಒಟ್ಟಾರೆ ಈ ಎಲ್ಲ ಬೆಳವಣಿಗೆಯಿಂದ ನನಗೆ ತೀರಾ ಅನ್ಯಾಯವಾಗಿದೆ. ಭವಿಷ್ಯದಲ್ಲಿ ಅಧ್ಯಾಪಕನಾಗುವ ಸಿದ್ಧತೆಯಲ್ಲಿದ್ದ ನಾನು, ಈಗ ಅನ್ಯಾಯವಾಗಿ ಕ್ರಿಮಿನಲ್ ಆಗುವಂತಾಗಿದೆ. ನಾನೀಗ ಮಾನಸಿಕವಾಗಿ ಜರ್ಝರಿತನಾಗಿದ್ದು, ನನ್ನ ಭವಿಷ್ಯ ಡೋಲಾಯಮಾನವಾಗಿದೆ. ನ್ಯಾಯಪರರಾದ ತಾವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ನ್ಯಾಯಕೊಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಅವರು ಮನವಿ ಸಲ್ಲಿಸಿದ್ದಾರೆ.

ಸಮಗ್ರ ತನಿಖೆಗೆ ಆಗ್ರಹಿಸಿ ಡಿವೈಎಫ್‌ಐ ಆಗ್ರಹ
ಫೇಸ್‌ಬುಕ್‌ನಲ್ಲಿ ಅಶ್ರಫ್ ಎಂ. ಸಾಲೆತ್ತೂರು ಎಂಬವರು ಮೂಢನಂಬಿಕೆ ಪ್ರಶ್ನಿಸಿ ಹಾಕಿದ ಸಾಮಾನ್ಯ ಬರಹವೊಂದರ ಆಧಾರದಲ್ಲಿ ಮಂಗಳೂರು ಉತ್ತರ ಠಾಣೆಯ ಪೊಲೀಸರು ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿರುವುದು, ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತನಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಮಂಗಳೂರು ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿತು.

ಅಶ್ರಫ್ ಅವರನ್ನು ಅಕ್ರಮವಾಗಿ ಠಾಣೆಯ ಲಾಕಪ್‌ನಲ್ಲಿ 24 ಗಂಟೆಗೂ ಹೆಚ್ಚುಕಾಲ ಬರಿಮೈಯಲ್ಲಿ ಕೂಡಿ ಹಾಕಿರುವುದು, ಹಿಂಸೆ ನೀಡಿರುವುದಾಗಿಯೂ ಅಶ್ರಫ್ ದೂರಿಕೊಂಡಿದ್ದರು. ಜಾಮೀನಿನ ಮೇಲೆ ಹೊರಬಂದ ಅಶ್ರಫ್ ತನಗಾದ ಅನ್ಯಾಯದ ವಿರುದ್ಧ ಫೇಸ್‌ಬುಕ್‌ನಲ್ಲಿ ಬರೆದದ್ದನ್ನೇ ನೆಪಮಾಡಿ ಬಂದರು ಠಾಣಾಧಿಕಾರಿ ಸುರೇಶ್‌ಕುಮಾರ್ ನಿಯಮ ಉಲ್ಲಂಘಿಸಿ ಜಾಮೀನು ರದ್ದತಿಯ ನೋಟಿಸ್ ನೀಡಿದ್ದಾರೆ ಎಂದು ಡಿವೈಎಫ್‌ಐ ಮನವಿಯಲ್ಲಿ ತಿಳಿಸಿದೆ.
ಅಲ್ಲದೆ, ಸಂತ್ರಸ್ತನಿಂದ ಬಲವಂತವಾಗಿ ಮುಚ್ಚಳಿಕೆ ಬರೆಸಿರುವುದು, ಮುಂದಕ್ಕೆ ಫೇಸ್‌ಬುಕ್‌ನಲ್ಲಿ ಬರೆಯಬಾರದೆಂದು ಬೆದರಿಸಿರುವುದೂ ನಡೆದಿದೆ. ಇದು ಜನಸಾಮಾನ್ಯನೊಬ್ಬನ ನಾಗರಿಕ ಹಕ್ಕಿನ ಮೇಲೆ ನಡೆದ ದೌರ್ಜನ್ಯವಾಗಿದೆ. ಈ ಕುರಿತು ಪೊಲೀಸ್ ಆಯುಕ್ತರು ಮಧ್ಯಪ್ರವೇಶಿಸಿ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು. ಅಮಾಯಕ ಅಶ್ರಫ್ ಸಾಲೆತ್ತೂರು ಅವರಿಗೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಡಿವೈಎಫ್‌ಐ ಮನವಿ ಸಲ್ಲಿಸಿತು.

ಮನವಿ ಸಲ್ಲಿಸುವ ನಿಯೋಗದಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಆಶಾ ಬೋಳೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News