ಕಾಂಗ್ರೆಸನ್ನು ನಂಬದೇ ಕಾರ್ಯಕರ್ತರನ್ನು ಕಡೆಗಣಿಸಿದ್ದು ಶಕುಂತಳಾ ಶೆಟ್ಟಿ ಸೋಲಿಗೆ ಕಾರಣ: ಮಹಮ್ಮದ್ ಆಲಿ

Update: 2018-09-07 14:01 GMT

ಪುತ್ತೂರು,ಸೆ.7: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಪುತ್ತೂರು ವಾರದ ಸಂತೆಯನ್ನು ಕಿಲ್ಲೆ ಮೈದಾನದಿಂದ ಎಪಿಎಂಸಿ ಯಾರ್ಡ್‍ಗೆ ಸ್ಥಳಾಂತರಗೊಳಿಸಲು ಆಗಿನ ಶಾಸಕಿ ಶಕುಂತಳಾ ಶೆಟ್ಟಿ ಅವರೇ ಕಾರಣರಾಗಿದ್ದು, ಇದನ್ನು ಸುಳ್ಳೆಂದು ಹೇಳುವುದಾದಲ್ಲಿ ಅವರು ಯಾವುದೇ ಕ್ಷೇತ್ರದಲ್ಲಿ ಪ್ರಮಾಣ ಮಾಡಲಿ ಎಂದು ಕಾಂಗ್ರೆಸ್ ಮುಖಂಡ, ಪುತ್ತೂರು ನಗರಸಭೆಯ ಸದಸ್ಯ ಮಹಮ್ಮದ್ ಆಲಿ ಸವಾಲು ಹಾಕಿದ್ದಾರೆ. 

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ಸಂತೆಯನ್ನು ದೂರದ ಎಪಿಎಂಸಿಗೆ ಸ್ಥಳಾಂತರಿಸಲು ಆಗಿನ ಉಪವಿಭಾಗಾಧಿಕಾರಿಗಳಿಗೆ ಶಕುಂತಳಾ ಶೆಟ್ಟಿ ಒತ್ತಡ ಹೇರಿದ್ದರು. ಆ ಸಂದರ್ಭದಲ್ಲಿ ನಾನು ಸ್ಥಳಾಂತರ ಬೇಡವೆಂದಿದ್ದೆ. ಆದರೆ ಶಕುಂತಳಾ ಶೆಟ್ಟಿ ಹಠ ಬಿಡದ ಕಾರಣ ಅನಿವಾರ್ಯವಾಗಿ ನಗರಸಭೆಯು ಒಪ್ಪಿಕೊಳ್ಳಬೇಕಾಯಿತು. ಇದರಿಂದಾಗಿ ಸ್ಥಳಾಂತರ ವಿವಾದದಲ್ಲಿ ನಗರ ಪಂಚಾಯತ್ ಮೇಲೆ ಗೂಬೆ ಕೂರಿಸಲಾಯಿತು.  ನಮ್ಮದೇ ಪಕ್ಷದ ಶಾಸಕಿಗೆ ಮುಜುಗರ ಆಗಬಾರದೆಂದು ನಾವು ಆವತ್ತು ಸತ್ಯ ಹೇಳಲಿಲ್ಲ. ಇವತ್ತು ನಮ್ಮ ಮೇಲೆ ದಬ್ಬಾಳಿಕೆ ನಡೆಸಿ, ನಮಗ್ಯಾರಿಗೂ ಟಿಕೆಟ್ ನೀಡದೆ ಸರ್ವಾಧಿಕಾರ ಮೆರೆದ ಶಕುಂತಳಾ ಶೆಟ್ಟಿ ಪಕ್ಷವನ್ನು ನಗರಸಭೆಯಲ್ಲಿ ಗೆಲ್ಲಿಸಿದ್ದರೆ ನಮ್ಮ ತಕರಾರು ಇರುತ್ತಿರಲಿಲ್ಲ. ಆದರೆ ಪಕ್ಷ ಹೀನಾಯವಾಗಿ ಸೋತಿದೆ. ಇಷ್ಟಾದರೂ ಮತ್ತೆ ನಮ್ಮ ಮೇಲೆ ಅವರ ತಂಡ ಗೂಬೆ ಕೂರಿಸುತ್ತಿದೆ.ಈಗ ನಾವು ಸತ್ಯ ಹೇಳಬೇಕಾಗಿದೆ. ಅಂದು 6 ತಿಂಗಳು ನಾವು ನಿದ್ದೆಯಿಲ್ಲದ ರಾತ್ರಿ ಕಳೆಯಲು ಕಾರಣವಾದ ಸಂತೆ ವಿವಾದಕ್ಕೆ ಶಕುಂತಳಾ ಶೆಟ್ಟಿಯೇ ಕಾರಣ. ಅದರಿಂದ ಕಾಂಗ್ರೆಸ್ ಪಕ್ಷದ್ದೇ ನಗರಸಭೆ ಆಡಳಿತಕ್ಕೆ ಕೆಟ್ಟ ಹೆಸರು ಬರುವಂತಾಯಿತು. ಅದರಿಂದ ಹೊರ ಬರಲು ನಾವು ಸಾಕಷ್ಟು ಹೆಣಗಾಡಬೇಕಾಯಿತು. ಈ ವಿಷಯದಲ್ಲಿ ನಾನು ಸುಳ್ಳು ಹೇಳುತ್ತಿರುವುದಾದರೆ ನಾನು ನಂಬುವ ದೇವರು ನನಗೆ ಶಿಕ್ಷೆ ನೀಡಲಿ ಎಂದರು.

ಕಾಂಗ್ರೆಸ್ ಪಕ್ಷದ್ದೇ ಆಡಳಿತ ನಗರಸಭೆಯಲ್ಲಿದ್ದರೂ ನಾವೆಲ್ಲ ಹೇಮನಾಥ ಶೆಟ್ಟಿ ನಿಷ್ಠರು ಎಂಬ ಏಕೈಕ ಕಾರಣಕ್ಕೆ ನಮ್ಮ ಆಡಳಿತವನ್ನು ಬಹಿರಂಗವಾಗಿ ಟೀಕಿಸಿದರು. ಕಾಂಗ್ರೆಸ್ ಆಡಳಿತವನ್ನೇ ಟೀಕಿಸಿ ಕಾಂಗ್ರೆಸ್‍ಗೆ ಮತ ಕೇಳಿದರು. ಹೀಗಿರುವಾಗ ಗೆಲ್ಲಲು ಹೇಗೆ ಸಾಧ್ಯ? ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಿಲ್ಲ. ಅಭ್ಯರ್ಥಿಗಳು ಯಾವ ಕಾರಣಕ್ಕೂ ನಮ್ಮ ಸಂಪರ್ಕ ಇಟ್ಟುಕೊಳ್ಳಬಾರದು ಎಂದು ಫರ್ಮಾನು ಹೊರಡಿಸಿದರು. ಮತ್ತೊಂದು ಕಡೆ ನಾವು ಮಾಡಿದ ಉತ್ತಮ ಕೆಲಸದ ಕರಪತ್ರವನ್ನು ಗುಪ್ತವಾಗಿ ಹಂಚಿ ಓಟು ಕೇಳಿದರು. 28ನೇ ವಾರ್ಡಿನಲ್ಲಂತೂ ಕಾಂಗ್ರೆಸ್, ಪಕ್ಷೇತರ, ಎಸ್‍ಡಿಪಿಐ ಅಭ್ಯರ್ಥಿಗಳೆಲ್ಲರೂ ನನ್ನ ಹೆಸರು ಬಳಸಿಕೊಂಡರು. ಈ ದ್ವಂದ್ವಗಳೇ ಪಕ್ಷದ ಸೋಲಿಗೆ ಕಾರಣ. ಈಗ ಸೋಲನ್ನೂ ನಮ್ಮ ತಲೆಗೆ ಕಟ್ಟಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶಕುಂತಳಾ ಶೆಟ್ಟಿ ಕೈಗೆ 31 ವಾರ್ಡ್‍ಗಳ ಬಿಫಾರ್ಮ್ ನೀಡಿ, ಗೆಲ್ಲಿಸುವ ಪೂರ್ಣ ಅಧಿಕಾರ ಪಕ್ಷ ನೀಡಿತ್ತು. ಸೋತರೆ ಕಾರಣ ಹೇಳಬಾರದು ಎಂದೂ ಸೂಚಿಸಿತ್ತು. ಇಷ್ಟಿದ್ದರೂ ಶಕುಂತಳಾ ಶೆಟ್ಟಿ ಸಾಮರ್ಥ್ಯ ಬಹಿರಂಗವಾಗಿದೆ ಎಂದರು. 

ಶಕುಂತಳಾ ಶೆಟ್ಟಿ ತಾನು ವಿಧಾನ ಸಭೆಯಲ್ಲಿ ಸೋತಾಗ ತನ್ನ ಸೋಲಿಗೆ ಹಿಂದುತ್ವ ಕಾರಣ ಎಂದು ಒಮ್ಮೆ ಹೇಳಿದರೆ, ಇನ್ನೊಮ್ಮೆ ಇವಿಎಂ ಕಾರಣ ಎಂದರೆ ಮತ್ತೊಮ್ಮೆ  ಹೇಮನಾಥ ಶೆಟ್ಟಿ ಬಣ ಕಾರಣ ಎಂದರು. ನಿಜವಾದ ಕಾರಣ ಏನು ಎಂಬುದನ್ನು ಒಮ್ಮೆಯಾದರೂ ಸ್ಪಷ್ಟಪಡಿಸಲಿ ಎಂದ ಅವರು ಅವರ ಸೋಲಿಗೆ ಈ ಮೇಲಿನ ಯಾವುದೂ ಕಾರಣವಲ್ಲ. ಅವರು ಕಾಂಗ್ರೆಸ್‍ನಲ್ಲಿದ್ದರೂ ಕಾಂಗ್ರೆಸ್ ಪಕ್ಷವನ್ನು ನಂಬದೇ ಇದ್ದದ್ದು, ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದು ಕಾರಣ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 80 ಶೇಕಡಾ ಕಾಂಗ್ರೆಸ್ ಕಾರ್ಯಕರ್ತರು ಇವರ ಪರವಾಗಿ ಪ್ರಚಾರವನ್ನೇ ಮಾಡಲಿಲ್ಲ. ಈಗ ತಾವು ಸೋತಿದ್ದಲ್ಲದೆ, ತಮ್ಮ ಸರ್ವಾಧಿಕಾರಿ ಧೋರಣೆಯಿಂದಾಗಿ ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನೇ ಸರ್ವನಾಶ ಮಾಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲಿ ಪಕ್ಷದ ಮುಖಂಡರಾದ ಉಷಾ ಧನಂಜಯ ಆಚಾರ್ಯ, ಕೊರಗಪ್ಪ ಗೌಡ, ಜಗದೀಶ್ ಕಜೆ, ಹನೀಫ್ ಪುಂಚತ್ತಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News