ಸಾರ್ವಜನಿಕರಿಗೆ ಸುಲಭಾಗಿ ಮರಳು ಸಿಗಲು ಸೂಕ್ತ ಕ್ರಮ : ಉಡುಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಸೂಚನೆ

Update: 2018-09-07 14:20 GMT

ಉಡುಪಿ, ಸೆ.7: ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲದೇ ತ್ವರಿತವಾಗಿ ಮರಳು ಸಿಗುವಂತಾಗಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಶುಕ್ರವಾರ ಉಡುಪಿ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿಗಳು, ಮಣಿಪಾಲದ ಜಿಪಂ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.

ಮನೆ ಕಟ್ಟುವವರಿಗೆ ಸುಲಭದಲ್ಲಿ ಮರಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಿಯಮಾನುಸಾರ ಜಿಲ್ಲಾಡಳಿತ ಕ್ರಮಕೈಗೊಂಡು ಸಾಂಪ್ರದಾಯಿಕವಾಗಿ ಮರಳುಗಾರಿಕೆ ಮಾಡುವವರಿಗೆ ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಯಾಂತ್ರಿಕ ಮರಳುಗಾರಿಕೆಗೆ ಅವಕಾಶ ನೀಡಬಾರದು. ಜಿಲ್ಲೆಯಲ್ಲಿ ಮರಳು ದಿಣ್ಣೆಗಳನ್ನು ಗುರುತಿಸುವ ಸಂಬಂಧ ಸುರತ್ಕಲ್‌ನ ಎನ್‌ಐಟಿಕೆ ಸಂಸ್ಥೆಯ ತಜ್ಞರ ವರದಿ ಅನುಸರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ಕರಾವಳಿಯಲ್ಲಿ ಮರಳು ಸಮಸ್ಯೆ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಹುಡುಕಲು ಶೀಘ್ರದಲ್ಲೇ ಈ ಭಾಗದ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

141 ಕೋಟಿ ರೂ.ನಷ್ಟದ ಅಂದಾಜು:  ಉಡುಪಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಒಟ್ಟು 141 ಕೋಟಿ ರೂ. ನಷ್ಟ ಸಂಭವಿಸಿದೆ. 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 1232 ಮನೆಗಳು ಹಾನಿಗೊಂಡಿವೆ. ರಾಜ್ಯ ಸರಕಾರ ಈಗಾಗಲೇ 18 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ. ಇನ್ನಷ್ಟು ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಅವರು ಭರವಸೆ ನೀಡಿದರು.

ಈಗಾಗಲೇ ಅರ್ಜಿ ಸಲ್ಲಿಸಿರುವ ಪಡಿತರ ಚೀಟಿದಾರರಿಗೆ ಪಡಿತರ ಕಾರ್ಡ್ ತ್ವರಿತವಾಗಿ ನೀಡಬೇಕು. ಈಗ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಲು ಹೊರಗುತ್ತಿಗೆ ಸಿಬ್ಬಂದಿ ನೇಮಿಸಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಆದೇಶಿಸಿದರು.

ಕುಡಿಯುವ ನೀರಿಗೆ ಪ್ರಸ್ತಾವನೆ: ಜಿಲ್ಲೆಯ ಕುಡಿಯುವ ನೀರು ಯೋಜನೆಯ ಹೊಸ ಕಾಮಗಾರಿಗಳಿಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿಕೊಡಿ. ಈ ಬಗ್ಗೆ ಪರಿಶೀಲಿಸಿ ಸರಕಾರ ಅನುಮೋದನೆ ನೀಡಲಿದೆ. ವಾರಾಹಿ ನೀರನ್ನು ಉಡುಪಿ ನಗರಕ್ಕೆ ಸರಬರಾಜು ಮಾಡುವ ಸಂಬಂಧ ನಗರಸಭೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಸಂಯುಕ್ತವಾಗಿ ಪರಿಶೀಲಿಸಬೇಕು. ಈ ಬಗ್ಗೆ ಶೀಘ್ರವೇ ಬೆಂಗಳೂರಿನಲ್ಲಿ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.

ಉಡುಪಿ ನಗರದಲ್ಲಿ ಮಹಿಳಾ ಹಾಸ್ಟೆಲ್‌ಗಳಿಗೆ ಹೆಚ್ಚು ಬೇಡಿಕೆ ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಜಾಗ ಗುರುತಿಸ ಬೇಕು. ಇದಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು. ಈಗ ಕಾರ್ಯ ನಿರ್ವಹಿಸುತ್ತಿರುವ ಹಾಸ್ಟೆಲ್‌ಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ಸೀಟು ಲಭ್ಯವಿಲ್ಲದಿದ್ದಲ್ಲಿ ಬಾಡಿಗೆ ಕಟ್ಟಡದಲ್ಲಿ ತಾತ್ಕಾಲಿಕ ಹಾಸ್ಟೆಲ್ ಪ್ರಾರಂಭಿಸಲು ಸಿಎಂ ಸೂಚಿಸಿದರು.

ಕೊರಗರಿಗೆ ಮನೆ: ಕೊರಗ ಸಮುದಾಯದವರಿಗೆ ಮನೆ ನಿರ್ಮಿಸಲು ಸರಕಾರ ನೆರವು ನೀಡುತ್ತಿದ್ದರೂ, ಮನೆ ನಿರ್ಮಾಣಕ್ಕೆ ಕಷ್ಟ ಪಡುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಏಜನ್ಸಿಗಳಿಂದಲೇ ಕೊರಗರಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯ ಸರಕಾರ ಎಲ್ಲಾ ಆರೋಗ್ಯ ವಿಮಾ ಯೋಜನೆಗಳನ್ನು ವಿಲೀನಗೊಳಿಸಿ ಆರೋಗ್ಯಶ್ರೀ ಯೋಜನೆ ಜಾರಿಗೆ ತಂದಿದೆ. ಆದರೂ ಈ ಕಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುವಲ್ಲಿ ಕೆಲವು ಗೊಂದಲಗಳುಂಟಾಗಿರುವುದು ರಾಜ್ಯ ಸರಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಆರೋಗ್ಯ ಕಾರ್ಡ್ ಇಲ್ಲದಿದ್ದರೆ, ಬಿಪಿಎಲ್ ಪಡಿತರ ಕಾರ್ಡ್ ತೋರಿಸಿದರೂ ಚಿಕಿತ್ಸೆ ಕೊಡಲು ರಾಜ್ಯ ಸರಕಾರ ಈಗಾಗಲೇ ಸೂಚಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯ ಸರಕಾರ ಎಲ್ಲಾ ಆರೋಗ್ಯ ವಿಮಾ ಯೋಜನೆಗಳನ್ನು ವಿಲೀನಗೊಳಿಸಿ ಆರೋಗ್ಯಶ್ರೀ ಯೋಜನೆ ಜಾರಿಗೆ ತಂದಿದೆ. ಆದರೂ ಈ ಕಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುವಲ್ಲಿ ಕೆಲವು ಗೊಂದಲಗಳುಂಟಾಗಿರುವುದು ರಾಜ್ಯ ಸರಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಆರೋಗ್ಯ ಕಾರ್ಡ್ ಇಲ್ಲದಿದ್ದರೆ, ಬಿಪಿಎಲ್ ಪಡಿತರ ಕಾರ್ಡ್ ತೋರಿಸಿದರೂ ಚಿಕಿತ್ಸೆ ಕೊಡಲು ರಾಜ್ಯ ಸರಕಾರ ಈಗಾಗಲೇ ಸೂಚಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ತೀವ್ರವಾಗಿದ್ದು, ಜನಸಾಮಾನ್ಯರಿಗೆ ಮರಳು ಕೈಗೆಟುಕದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ನಿಯಮ ಸರಳೀಕರಿಸಿ ಮರಳು ಸಿಗಲು ವ್ಯವಸ್ಥೆ ಮಾಡಬೇಕು. ಸಾಂಪ್ರದಾಯಿಕ ಮರಳುಗಾರಿಕೆ ಮಾಡುತ್ತಿದ್ದವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮಾಜಿಕ ಪರಿಶೀಲನೆ ಹೆಸರಿನಲ್ಲಿ ಕಾಮಗಾರಿ ವಿಳಂಭವಾಗುತ್ತಿದೆ. ಇದರಿಂದ ಗ್ರಾಪಂಗಳು ಉದ್ಯೋಗ ಖಾತ್ರಿ ಯೋಜನೆಗಳನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿವೆ. ಈ ಬಗ್ಗೆ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಅನಿಲ ಬಾಗ್ಯ ಯೋಜನೆಯಡಿ ಹಲವು ಫಲಾನುಭವಿಗಳಿಗೆ ಗ್ಯಾಸ್ ಕನೆಕ್ಷನ್ ಮಂಜೂರಾಗಿದ್ದರೂ, ಅವರಿಗೆ ಸಿಲಿಂಡರ್ ಇನ್ನೂ ಸಿಕ್ಕಿಲ್ಲ. ಆದರೆ ಅವರ ರೇಶನ್ ಕಾರ್ಡ್‌ನಲ್ಲಿ ಗ್ಯಾಸ್ ಕನೆಕ್ಷನ್ ಸಿಕ್ಕಿದೆ ಎಂದು ನಮೂದಾಗಿದೆ. ಇದರಿಂದ ಫಲಾನುಭವಿಗಳಿಗೆ ಸೀಮೆಎಣ್ಣೆಯೂ ಸಿಗುತ್ತಿಲ್ಲ ಎಂಬುದನ್ನು ಸಿಎಂ ಗಮನಕ್ಕೆ ತಂದರು.

ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ಎಸ್.ಎಲ್. ಬೋಜೇ ಗೌಡ, ಬಿ.ಎಂ. ಫಾರೂಕ್, ಪ್ರತಾಪ್‌ಚಂದ್ರ ಶೆಟ್ಟಿ, ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ್ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News