ನನ್ನ ಸರಕಾರ ಸುಭದ್ರವಾಗಿದೆ, ಅಭದ್ರತೆ ಮಾಧ್ಯಮಗಳಲ್ಲಿ ಮಾತ್ರ : ಉಡುಪಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-07 14:35 GMT

ಮಣಿಪಾಲ, ಸೆ.7: ‘ನಮ್ಮ ಮೈತ್ರಿ ಸರಕಾರ ಸುಭದ್ರವಾಗಿದೆ. ಅಭದ್ರತೆ ಇರುವುದು ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳಲ್ಲಿ ಮಾತ್ರ. ಮಾಧ್ಯಮಗಳಲ್ಲಿ ಅಸಾಧ್ಯವಾದುದೆಲ್ಲವೂ ಚರ್ಚೆಯಾಗುತ್ತಿವೆ. ನಿಮ್ಮ ಖುಷಿಯಂತೆ ಬರೆಯಿರಿ, ಚರ್ಚೆ ಮಾಡಿಕೊಳ್ಳಿ. ನಾನು ಯಾರನ್ನೂ ತಡೆಯುವುದಿಲ್ಲ. ಮಾಧ್ಯಮಗಳಲ್ಲಿ ಸರಕಾರ ಬೀಳುತ್ತೆ ಎಂದು ಚರ್ಚೆಯಾದಷ್ಟು ನಮ್ಮ ಮೈತ್ರಿ ಸರಕಾರ ಸುಭದ್ರವಾಗುತ್ತಾ ಹೋಗುತ್ತೆ.’ ಇದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಗಾದಿಗೇರಿದ ಬಳಿಕ ಮೊದಲ ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿ, ಮಣಿಪಾಲದ ಜಿಪಂ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯ ಕೊನೆಯಲ್ಲಿ ಪತ್ರಕರ್ತರು ರಾಜ್ಯ ಸರಕಾರದ ಕುರಿತು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಪರಿ.

ಬೆಂಗಳೂರಿನಿಂದ ಬರುವಾಗ ತುಂಬಾ ಟೆನ್ಶನ್‌ನಲ್ಲಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಮಾಡುವಾಗಲೂ ನಿಮ್ಮ ಮುಖದಲ್ಲಿ ದುಗುಡ ಇದ್ದೇಇತ್ತು. ಆ ಬಳಿಕ ಬೆಳಗಾವಿಯ ವಿವಾದ ಸುಖ್ಯಾಂತವಾಗಿ ಬಗೆಹರಿದ ಸುದ್ದಿ ಕೇಳಿ ಈಗ ನಿರಾಳರಾಗಿರುವಂತಿದೆ ಎಂದು ಪತ್ರಕರ್ತರೊಬ್ಬರು ಹೇಳಿದಾಗ, ನಾನು ಯಾವತ್ತೂ, ಯಾವುದೇ ಕಾರಣಕ್ಕೂ ಟೆನ್ಶನ್‌ ಮಾಡಿಕೊಂಡಿದ್ದಿಲ್ಲ ಎಂದರು.

ನಾವು ಮೊದಲಿನಿಂದಲೂ ದೇವರಲ್ಲಿ ನಂಬಿಕೆ ಇಟ್ಟಿರುವ ಕುಟುಂಬ. ಹೀಗಾಗಿ ಉಡುಪಿಗೆ ಬಂದಾಗ ಸಹಜವಾಗಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದೇನೆ. ನಾಡಿನ ಜನತೆಯ ಒಳಿತಿಗಾಗಿ ಪ್ರಾರ್ಥಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಸಹ ಆಗಿದೆ ಎಂದು ಹೇಳಿದರು.

ಬೆಳಗಾವಿಯ ವಿವಾದದ ಕುರಿತಂತೆ ನಾನೆಂದೂ ಟೆನ್ಶನ್ ಮಾಡಿಕೊಂಡೇ ಇಲ್ಲ. ಬೆಳಗಾವಿ ವಿವಾದ ಬಗ್ಗೆ ಟೆನ್ಶನ್ ಇದ್ದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ಬೆಂಗಳೂರಿನಲ್ಲಿ ಕೂತೇ ರಾಜಕೀಯ ಮ್ಯಾನೇಜ್ ಮಾಡ್ತಿದ್ದೆ. ಉಡುಪಿಗೆ ಬಂದು ಅಧಿಕಾರಿಗಳ ಸಭೆ ಮಾಡ್ತಿರಲಿಲ್ಲ ಎಂದರು.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿವಾದ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗಿದೆ. ಅದರಲ್ಲಿ ಯಾವುದೇ ವಿವಾದಗಳಿರಲಿಲ್ಲ. ಅದು ಕಾಂಗ್ರೆಸ್ ಪಕ್ಷದೊಳಗಿನ ವಿಷಯ. ಇನ್ನು ನಮ್ಮ ಮೈತ್ರಿ ಸರಕಾರದ ಸಹೋದ್ಯೋಗಿಗಳ ನಡುವಿನ ಸಂಬಂಧ ತುಂಬಾ ಚೆನ್ನಾಗಿದೆ. ಎಲ್ಲವೂ ಸಾಮರಸ್ಯದಿಂದಲೇ ನಡೆಯುತ್ತಿದೆ. ಹೀಗಾಗಿ ನನ್ನ ಸರಕಾರ ಸುಭದ್ರವಾಗಿದೆ ಎಂದು ಕುಮಾರಸ್ವಾಮಿ ಮತ್ತೊಮ್ಮೆ ಸಮರ್ಥಿಸಿಕೊಂಡರು.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಪ್ರಕರಣ ಸುಖ್ಯಾಂತಗೊಳ್ಳುವುದು ಕಷ್ಟವೇ ಇರಲಿಲ್ಲ. ನಿರೀಕ್ಷಿತವೇ ಆಗಿತ್ತು. ಅಲ್ಲದೇ ಈ ಚುನಾವಣೆಯಲ್ಲಿ ಜಯವಾಗಿರುವುದು ಯಾವುದೇ ಬಣಕ್ಕಲ್ಲ. ಅದು ಕಾಂಗ್ರೆಸ್ ಪಕ್ಷಕ್ಕೆ ಆಗಿದೆ ಎಂದವರು ತಿಳಿಸಿದರು.

ಸಿದ್ದರಾಮಯ್ಯ ಅವರ ವಿದೇಶ ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ವಿದೇಶಕ್ಕೆ ಹೋಗೋದು ತಪ್ಪಾ. ಅವರೇನು ಒಬ್ಬರೇ ಹೋಗಿದ್ದಾರಾ. ಅವರೊಂದಿಗೆ ಸಚಿವರು, ಎಂಎಲ್‌ಎಗಳೂ ಹೋಗಿಲ್ವಾ. ಅಲ್ಲದೇ ಅವರು ಹೋಗೊದನ್ನು ನಾನು ತಡೆಯೋಕಾಗುತ್ತಾ ಎಂದು ಮರು ಪ್ರಶ್ನಿಸಿದರು.

ಒಟ್ಟಿನಲ್ಲಿ ತಾನು ಮುನ್ನಡೆಸುತ್ತಿರುವ ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು, ಎಲ್ಲಾ ಸಚಿವರು ಒಂದಾಗಿದ್ದಾರೆ. ಅಭದ್ರತೆಯನ್ನು ಹುಡುಕುತ್ತಿರುವುದು ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಮಾತ್ರ ಎಂದು ಅವರು ವುತ್ತೆ ಮತ್ತೆ ಪುನರುಚ್ಛಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News