×
Ad

ಗಾಂಧೀಜಿ ಚಿಂತನೆ ಸರ್ವಕಾಲಕ್ಕೂ ಸ್ಪೂರ್ತಿದಾಯಕ; ಪುರಂದರ ಹೆಗ್ಡೆ

Update: 2018-09-07 20:42 IST

ಬಂಟ್ವಾಳ, ಸೆ. 7: ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಕಾರಣಕ್ಕೆ ಮಾತ್ರ ನಮಗೆ ಆದರ್ಶವಲ್ಲ, ಅವರ ನಡೆ, ನುಡಿ, ಇಡೀ ಬದುಕು ಹಾಗೂ ಚಿಂತನೆಗಳು ಸರ್ವಕಾಲಕ್ಕೂ ಸ್ಪೂರ್ತಿದಾಯಕ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದ್ದಾರೆ.

ಗಾಂಧೀ ಜಯಂತಿಯ 150ನೆ ವರ್ಷಾಚರಣೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಧಾರವಾಡ ಇವರ ಸಹಯೋಗದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ "ಗಾಂಧಿ 150- ಒಂದು ರಂಗ ಪಯಣ" ದ ಅಂಗವಾಗಿ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ರಂಗವೇದಿಕೆಯಲ್ಲಿ ಬಂಟ್ವಾಳ ರೋಟರೀ ಕ್ಲಬ್ ಹಾಗೂ ಸಂಸಾರ ಜೋಡುಮಾರ್ಗ ಆಯೋಜನೆಯಲ್ಲಿ ನಡೆದ  "ಗಾಂಧಿ 150 ರಂಗರೂಪಕ"ಕ್ಕೆ ಚಾಲನೆ ನೀಡಿ ಮಾತನಾಡಿದರು. 

ಮಹಾತ್ಮಾ ಗಾಂಧೀಜಿಯವರ ಚಿಂತನೆಗಳನ್ನು ಮನೆ ಮನಗಳಿಗೆ ತಲುಪಿಸುವುದು ಇಂದಿನ  ಅಗತ್ಯವಾಗಿದ್ದು, ಯುವ ಪೀಳಿಗೆ ಗಾಂಧೀಜಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕಿದೆ ಎಂದರು. 

ರಂಗ ಮುಖೇನ ಗಾಂಧೀಜಿಯ ತತ್ವಗಳನ್ನು ಜನಮನಕ್ಕೆ ತಲುಪಿಸುವ ಕಾರ್ಯ "ಗಾಂಧೀ-150 ಒಂದು ರಂಗ ಪಯಣ " ದ ಮೂಲಕ ಯಶಸ್ಸು ಕಾಣಲಿ ಎಂದವರು ಶುಭ ಹಾರೈಸಿದರು.

ಶಾರದಾ ಪ್ರೌಢಶಾಲೆಯ ಸಂಚಾಲಕ ವೇದಮೂರ್ತಿ ಎಂ.ಜನಾರ್ಧನ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿ ಬಾಲ್ಯಾವಸ್ಥೆಯಲ್ಲಿ ಕಂಡ ನಾಟಕವೊಂದು ಗಾಂಧೀಜಿಯ ಸತ್ಯ ನಿಷ್ಠೆಗೆ ಪ್ರೇರಣೆಯಾಗಿತ್ತು. ಇಂದು ಅಂತಹುದೇ ರಂಗ ಪ್ರಯೋಗದ ಮೂಲಕ ಗಾಂಧೀಜಿಯನ್ನು ಜನಮಾನಸಕ್ಕೆ ಹತ್ತಿರವಾಗಿಸುತ್ತಿರುವುದು ಅತ್ಯುತ್ತಮ ಕಾರ್ಯ ಎಂದರು. 

ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರೊ.ಮಂಜುನಾಥ ಆಚಾರ್ಯ, ಅಭಿರುಚಿ ಜೋಡುಮಾರ್ಗದ ಮುಖ್ಯಸ್ಥ ಮಹಾಬಲೇಶ್ವರ ಹೆಬ್ಬಾರ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ರೋಟರಿ ಬಳಗದ ರಿತೇಶ್ ಬಾಳಿಗಾ, ಪ್ರತಿಭಾ ರೈ, ಪ್ರಕಾಶ್ ಬಾಳಿಗಾ,  ಧನಂಜಯ್ ಬಾಳಿಗಾ, ಗಣೇಶ್ ಸೋಮಯಾಜಿ, ವಲ್ಲಭೇಶ್ ಶೆಣೈ, ಎಸ್‍ಎಲ್‍ಎನ್‍ಪಿ ವಿದ್ಯಾಲಯದ ಮುಖ್ಯ ಶಿಕ್ಷಕಿ ರಮಾ ಎಸ್ ಭಂಡಾರಿ, ಕಲಾವಿದ ತಂಡದ ವ್ಯವಸ್ಥಾಪಕ ಮಧ್ವರಾಜ್, ಪತ್ರಕರ್ತ ಅಬ್ದುಲ್ ರಹಿಮಾನ್ ತಲಪಾಡಿ, ಜಯಾನಂದ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ ಸ್ವಾಗತಿಸಿದರು, ಶಾರದಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಭೋಜ ವಂದಿಸಿದರು. ಇಂಟರ್ಯಾಕ್ಟ್ ಕ್ಲಬ್ ನ ಮಾರ್ಗದರ್ಶಿ ಶಿಕ್ಷಕ ಸುಧಾಕರ್ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ  ಬೊಳುವಾರು ಮಹಮ್ಮದ್ ಕುಂಞಿ ಅವರ 'ಪಾಪುಗಾಂಧಿ ಗಾಂಧಿ ಬಾಪು ಆದ ಕಥೆ'ಯನ್ನು ಆಧರಿಸಿದ "ಗಾಂಧಿ-150 ರಂಗ ರೂಪಕ" ವನ್ನು ರಂಗ ಪಯಣದ ಕಲಾವಿದರು ಮನೋಜ್ಞವಾಗಿ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News