ಕುಂದಾಪುರ : ಲಂಚ ಸ್ವೀಕಾರ ಪ್ರಕರಣ: ಅಧಿಕಾರಿಗೆ 4 ವರ್ಷ ಕಠಿಣ ಜೈಲುಶಿಕ್ಷೆ

Update: 2018-09-07 15:19 GMT

ಕುಂದಾಪುರ, ಸೆ.7: ಜಾಗದ ಭೂಪರಿವರ್ತನೆಗೆ ನಿರಪೇಕ್ಷಣಾ ಪತ್ರ ನೀಡುವ ಸಂಬಂಧ ಲಂಚ ಸ್ವೀಕಾರ ಪ್ರಕರಣದ ಆರೋಪಿ ಕುಂದಾಪುರ ನಗರ ಯೋಜನೆ ಪ್ರಾಧಿಕಾರದ ನಗರ ಯೋಜಕ ಹಾಗೂ ಪ್ರಭಾರ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್(43)ಗೆ ಕುಂದಾಪುರ ಹೆಚ್ಚುವರಿ ಸತ್ರ ಮತ್ತು ವಿಶೇಷ ನ್ಯಾಯಾಲಯವು ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಸೆ.5ರಂದು ತೀರ್ಪು ನೀಡಿದೆ.

ಕೋಟೇಶ್ವರ ಗ್ರಾಮದ ಸತೀಶ್ ಕುಮಾರ್ ಹಂಗಳೂರು ಗ್ರಾಮದ ಮುಹಮ್ಮದ್ ಯೂಸೂಫ್ ಎಂಬವರ ಜಾಗಕ್ಕೆ ಸಂಬಂಧಿಸಿ ಪವರ್ ಆಫ್ ಅಟರ್ನಿ ಪಡೆದಿದ್ದು, ಈ ಜಾಗದಲ್ಲಿ ಯೂಸೂಫ್ ಮನೆ ನಿರ್ಮಿಸಲು ಭೂಪರಿವರ್ತನೆಗೆ ನಿರಪೇಕ್ಷಣಾ ಪತ್ರ ಸಂಬಂಧ ಸತೀಶ್ ಕುಮಾರ್ ಕುಂದಾಪುರ ನಗರ ಯೋಜನಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್ 3000ರೂ. ಲಂಚದ ಬೇಡಿಕೆಯನ್ನು ಇಟ್ಟಿದ್ದರು. ಲಂಚ ನೀಡಲು ಒಪ್ಪದ ಸತೀಶ್ ಕುಮಾರ್, 2010ರ ಸೆ.1ರಂದು ಅಶೋಕ್ ಕುಮಾರ್ ವಿರುದ್ಧ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಆಗಿನ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಬಿ.ಪಿ.ದಿನೇಶ್ ಕುಮಾರ್ ಕಾರ್ಯಾಚರಣೆ ನಡೆಸಿ ಲಂಚದ ಹಣ ಸ್ವೀಕರಿಸುತ್ತಿದ್ದ ಅಶೋಕ್ ಕುಮಾರ್‌ನನ್ನು ಬಂಧಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಅವರು ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರ ಹೆಚ್ಚುವರಿ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಸೆ.1ರಂದು ಆರೋಪಿ ಅಶೋಕ್ ಕುಮಾರ್‌ನನ್ನು ದೋಷಿ ಎಂಬುದಾಗಿ ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಸೆ.5ರಂದು ಪ್ರಕಟಿಸುವುದಾಗಿ ತಿಳಿಸಿದರು.
ಅದರಂತೆ ಆರೋಪಿಗೆ ಕಲಂ 7 ಲಂಚ ನಿರೋಧ ಕಾಯಿದೆ 1988ರ ಪ್ರಕಾರ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಎರಡು ತಿಂಗಳು ಹೆಚ್ಚುವರಿ ಸಾದಾ ಶಿಕ್ಷೆ, ಕಲಂ 13(1)ಡಿ ಜೊತೆಗೆ 13(2) ರಲ್ಲಿ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಮೂರು ತಿಂಗಳು ಸಾದಾ ಶಿಕ್ಷೆ ವಿಧಿಸಿ ನ್ಯಾಯಾಧೀಶರು ಸೆ.5ರಂದು ತೀರ್ಪು ನೀಡಿದರು. ಸರಕಾರದ ಪರವಾಗಿ ಉಡುಪಿ ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕ ವಿಜಯುಮಾರ್ ಶೆಟ್ಟಿ ಇಂದ್ರಾಳಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News