ಮೇಲ್ಜಾತಿಯ ಬಡವರಿಗೆ ಶೇ.25 ಮೀಸಲಾತಿಗೆ ಕೇಂದ್ರ ಸಚಿವ ಅಠಾವಳೆ ಸಲಹೆ

Update: 2018-09-07 15:44 GMT

ಲಖ್ನೊ, ಸೆ.7: ಮೀಸಲಾತಿ ಮಿತಿಯನ್ನು ಶೇ.75ಕ್ಕೆ ಏರಿಸುವ ಮೂಲಕ ಮೇಲ್ಜಾತಿಯ ಬಡವರಿಗೆ ಶೇ.25 ಮೀಸಲಾತಿಯನ್ನು ಒದಗಿಸಬೇಕು ಎಂಬ ಸಲಹೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ ಅಠಾವಳೆ ಶುಕ್ರವಾರ ನೀಡಿದ್ದಾರೆ.

ಮೇಲ್ಜಾತಿಯ ಬಡವರಿಗೆ ಶೇ.25 ಮೀಸಲಾತಿಯನ್ನು ನೀಡಿದರೆ ಅದರಿಂದ ಎಲ್ಲರಿಗೂ ಲಾಭವಾಗಲಿದೆ ಎಂದು ನನಗನಿಸುತ್ತದೆ. ದಲಿತರಿಗೆ ಮಾತ್ರ ಮೀಸಲಾತಿ ನೀಡಲಾಗುತ್ತಿರುವುದರಿಂದ ನಮಗೆ ವಂಚನೆಯಾಗುತ್ತಿದೆ ಎಂದು ಮೇಲ್ಜಾತಿಯವರು ಯೋಚಿಸುತ್ತಾರೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತರ ಹಿಂದುಳಿದ ಜಾತಿಗಳು ಮತ್ತು ದಲಿತರಿಗೆ ಭಡ್ತಿಯಲ್ಲಿ ಮೀಸಲಾತಿ ನೀಡುವ ಬಗ್ಗೆ ಸಂಸತ್‌ನ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಸರಕಾರ ಪರಿಗಣಿಸಲಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.

ಎಸ್ಸಿ/ಎಸ್ಟಿ ಕಾಯ್ದೆಗೆ ಇತ್ತೀಚೆಗೆ ಸರಕಾರ ಮಾಡಿರುವ ತಿದ್ದುಪಡಿಯ ಕುರಿತು ಮಾತನಾಡಿದ ಅಠಾವಳೆ, ಸದ್ಯಕ್ಕಂತೂ ಈ ತಿದ್ದುಪಡಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗದು ಎಂದು ತಿಳಿಸಿದ್ದಾರೆ. ಈ ಕಾಯ್ದೆಯ ದುರುಪಯೋಗ ಆಗುವುದಿಲ್ಲ ಎಂದು ನಾನು ಸಮಾಜದ ಎಲ್ಲ ವರ್ಗಗಳ ಜನರಿಗೆ ಭರವಸೆ ನೀಡುತ್ತೇನೆ ಎಂದು ತಿಳಿಸಿದ ಅಠಾವಳೆ, ಈ ಕಾಯ್ದೆಯಲ್ಲಿ ಬದಲಾವಣೆ ತರಲು ಆಗ್ರಹಿಸುವ ಬದಲು ಮೇಲ್ಜಾತಿಯವರು ದಲಿತರ ಬಗೆಗಿನ ತಮ್ಮ ದೃಷ್ಟಿಕೋನವನ್ನು ಬದಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಗುರುವಾರ ನಡೆದ ಭಾರತ್ ಬಂದ್ ಬಗ್ಗೆ ಮಾತನಾಡಿದ ಸಚಿವರು, ವಾಸ್ತವದಲ್ಲಿ ಅದು ಸರಕಾರಕ್ಕೆ ಮಸಿ ಬಳಿಯಲು ವಿರೋಧ ಪಕ್ಷಗಳು ರೂಪಿಸಿದ ಸಂಚು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News