ವಿದ್ಯುತ್‌ಚಾಲಿತ ವಾಹನಗಳ ಮೇಲೆ ಹೂಡಿಕೆ ಮಾಡುವಂತೆ ಪ್ರಧಾನಿ ಮೋದಿ ಕರೆ

Update: 2018-09-07 15:46 GMT

ಹೊಸದಿಲ್ಲಿ, ಸೆ.7: ವಿದ್ಯುತ್‌ಚಾಲಿತ ವಾಹನಗಳನ್ನು ತಯಾರಿಸುವ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೂಡಿಕೆದಾರರಿಗೆ ಕರೆ ನೀಡಿದ್ದಾರೆ. ಹೊಸದಿಲ್ಲಿ ನಡೆದ ಜಾಗತಿಕ ಚಲನಶೀಲ ಸಮ್ಮೇಳನ, ಮೂ, ನಲ್ಲಿ ಮಾತನಾಡಿದ ಪ್ರಧಾನಿ, ತೊಡಕುರಹಿತ ಚಲನಶೀಲತೆಯು ಆರ್ಥಿಕ ಮತ್ತು ಪಾರಿಸಾರಿಕ ವೆಚ್ಚವನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಉತ್ತಮ ಚಲನಶೀಲತೆ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ.

ಚಲನಶೀಲ ಅಭಿಯಾನಗಳ ಮುಖ್ಯ ಉದ್ದೇಶ ಸಾರ್ವಜನಿಕ ಸಾರಿಗೆಯಾಗಬೇಕು ಎಂದು ತಿಳಿಸಿದ ಮೋದಿ, ಉತ್ಪಾದಕರ ತಮ್ಮ ಗಮನವನ್ನು ಕಾರ್‌ನಿಂದ ಆಚೆಗೆ ಸ್ಕೂಟರ್ ಮತ್ತು ರಿಕ್ಷಾ ಮುಂತಾದ ವಾಹನಗಳ ಮೇಲೆ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಸ್ವಚ್ಛ ಇಂಧನದ ಬಲವನ್ನು ಹೊಂದಿರುವ ಸ್ವಚ್ಛ ಚಲನಶೀಲತೆ ಹವಾಮಾನ ಬದಲಾವಣೆಯ ವಿರುದ್ಧ ನಮ್ಮ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಲಿದೆ ಎಂದು ಇದೇ ವೇಳೆ ಪ್ರಧಾನಿ ಅಭಿಪ್ರಾಯಿಸಿದ್ದಾರೆ.

ಜಗತ್ತಿನ ಪ್ರಸಿದ್ಧ ವಾಹನ ತಯಾರಿಕಾ ಸಂಸ್ಥೆಗಳ ಸಿಇಒಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಸಮ್ಮೇಳನದಲ್ಲಿ ಮಾತನಾಡಿದ ಮೋದಿ, ಸರಕಾರವು ಬ್ಯಾಟರಿಯಿಂದ ಸ್ಮಾರ್ಟ್ ಚಾರ್ಜರ್‌ವರೆಗೆ ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆಯಲ್ಲಿ ಅಗತ್ಯ ಬೀಳುವ ಎಲ್ಲ ವಸ್ತುಗಳಲ್ಲಿ ಹೂಡಿಕೆ ಮಾಡಲು ಕಾತರವಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಒಟ್ಟಾರೆ ವಾಹನ ಮಾರಾಟದ ಶೇ.15 ವಿದ್ಯುತ್ ಚಾಲಿತ ವಾಹನಗಳಾಗಿರಬೇಕು ಎಂಬ ಗುರಿಯನ್ನು ಸರಕಾರ ಹೊಂದಿದೆ. ಆಮೂಲಕ ಹಸಿರುಮನೆ ಪರಿಣಾಮ ಮತ್ತು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬಿಕೆಯನ್ನು ಕಡಿಮೆಗೊಳಿಸಲು ನಿರ್ಧರಿಸಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News