​ಸೇವೆಯಲ್ಲಿ ವಿಶ್ವಾಸಾರ್ಹತೆ ಮುಖ್ಯ: ಇರ್ಫಾನ್ ರಝಾಕ್

Update: 2018-09-07 15:56 GMT

ಉಡುಪಿ, ಸೆ.7: ಸೇವೆಯಲ್ಲಿ ವಿಶ್ವಾಸಾರ್ಹತೆ ಮುಖ್ಯ. ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕ್ರೆಡೈ ಮಾಜಿ ರಾಷ್ಟ್ರೀಯ ಅಧ್ಯಕ್ಷ ಇರ್ಫಾನ್ ರಝಾಕ್ ಹೇಳಿದ್ದಾರೆ.

ಕಾನ್ಫಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್‌ ಅಸೋಸಿಯೇಷನ್ ಆಪ್ ಇಂಡಿಯಾ(ಕ್ರೆಡೈ) ಇದರ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಗರದ ಮಿಷನ್ ಕಾಂಪೌಂಡ್‌ನಲ್ಲಿರುವ ಬಾಸೆಲ್ ಮಿಷನರಿ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಕ್ರೆಡೈ ಕರ್ನಾಟಕದ ರಾಜ್ಯ ಸಮ್ಮೇಳನ ‘ಸ್ಟೇಟ್‌ಕಾನ್-2018’ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಂದು ನಗರಗಳು ತುಂಬಾ ವೇಗದಲ್ಲಿ ಬೆಳೆಯುತ್ತಿವೆ. ಆದರೆ ನಗರದಲ್ಲಿ ನಿರ್ಮಾಣವಾಗುತ್ತಿರುವ ಹೆಚ್ಚಿನ ಕಟ್ಟಡಗಳು ಕಾನೂನು ಪಾಲನೆ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಆಲೋಚನೆಯನ್ನು ನಾವು ಬದಲಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕ್ರೆಡೈ ಉಡುಪಿಯ ಅಧ್ಯಕ್ಷ ಜೆರ್ರಿ ಡಯಾಸ್ ಮಾತನಾಡಿ, ಜಿಲ್ಲೆಯಲ್ಲಿ ಮರಳಿನ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಆದರೂ ಈ ಕುರಿತು ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಮರಳಿನ ಅಭಾವದಿಂದ ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಜಿಎಸ್‌ಟಿಯಿಂದ ಮನೆ ಖರೀದಿಗೆ ಅಡಚಣೆಯಾಗಿದೆ. ಇದರ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಕ್ರೆಡೈ ಕರ್ನಾಟಕ ಅಧ್ಯಕ್ಷ ಶಂಕರ್ ಶಾಸ್ತ್ರಿ ವಹಿಸಿದ್ದರು. ಕ್ರೆಡೈ ರಾಷ್ಟ್ರೀಯ ಉಪಾಧ್ಯಕ್ಷ ಶಿವ ರೆಡ್ಡಿ, ಕರ್ನಾಟಕ ಸಲಹೆಗಾರ ಬಾಲಕೃಷ್ಣ ಹೆಗ್ಡೆ, ಮಾರ್ಗದರ್ಶಕ ಆರ್.ನಾಗರಾಜ್ ರೆಡ್ಡಿ, ಚಯರ್‌ಮೆನ್ ಡಾ.ವಿ.ಕೆ.ಜಗ ದೀಶ್ ಬಾಬು, ತೆಲಂಗಾಣ ಅಧ್ಯಕ್ಷ ರಾಮ ರೆಡ್ಡಿ ಮುಖ್ಯ ಅತಿಥಿಗಳಾಗಿದ್ದರು.

ಕ್ರೆಡೈ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಎಸ್.ಪ್ರಕಾಶ್, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅನಿಲ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೋಯನ್ ಲೂವಿಸ್ ಉಪಸ್ಥಿತರಿದ್ದರು. ಸಮ್ಮೇಳನದ ಸಂಘಟನಾ ಅಧ್ಯಕ್ಷ ಸುಧೀರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ವಿನ್ಸೆಂಟ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News