ಪರಿಸರ ಸಂರಕ್ಷಣೆಯ ಕರ್ತವ್ಯವನ್ನು ತೆನೆ ಹಬ್ಬ ಎಚ್ಚರಿಸಲಿ: ಉಡುಪಿ ಬಿಷಪ್

Update: 2018-09-07 16:45 GMT

ಉಡುಪಿ, ಸೆ.7: ಮಳೆಯಿಂದ ಸಮೃದ್ಧಗೊಂಡು ಪೃಕೃತಿಯು ಫಲಭರಿತವಾಗುವಾಗ ಭರವಸೆಯ ಮಹಾಪೂರದಂತೆ ಬರುವ ತೆನೆ ಹಬ್ಬ ಎಲ್ಲರನ್ನು ಸಂತೃಪ್ತಿಗೊಳಿಸುತ್ತದೆ. ಇದನ್ನೇ ಮಾತೆ ಮರಿಯಮ್ಮನವರ ಹುಟ್ಟುಹಬ್ಬ ಅಥವಾ ಮೊಂತಿ ಹಬ್ಬವಾಗಿ ಅಕ್ಕರೆಯಿಂದ ಆಚರಿಸಲಾಗುತ್ತದೆ ಎಂದು ಪರಮಪೂಜ್ಯ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಲೋಬೊ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಇಂದು ಎಲ್ಲರನ್ನು ಸಾಕಿ ಸಲಹುವ ಪೃಕೃತಿಮಾತೆಯು ಮನುಷ್ಯನ ದಬ್ಬಾಳಿಕೆಗೆ ಒಳಗಾಗಿದ್ದಾಳೆ. ಇದರ ಪರಿಣಾಮವಾಗಿ ಇತ್ತೀಚೆಗೆ ಕೇರಳ ಹಾಗೂ ಕೊಡಗಿ ನಲ್ಲಿ ಸಂವಿಸಿದ ಪ್ರಕೃತಿ ವಿಕೋಪಗಳು, ಅನಿಶ್ಚಿತ ಮಳೆ, ವಾತಾವರಣದ ವೈಪರೀತ್ಯ, ವಿಚಿತ್ರವಾದ ರೋಗರುಜಿನಗಳು, ಇನ್ನಿತರ ವಿಷಮತೆಗಳು ಸಂಭವಿಸುತ್ತಿವೆ. ಒಂದು ರೀತಿಯಲ್ಲಿ ಇದನ್ನು ಪೃಕೃತಿಮಾತೆಯ ದುಃಖ ಎನ್ನ ಬಹುದು. ಭೂಮಾತೆಯನ್ನು, ಪರಿಸರವನ್ನು ಸಂರಕ್ಷಿಸುವ ಆದ್ಯ ಕರ್ತವ್ಯದ ಬಗ್ಗೆ ಈ ಹಬ್ಬವು ಎಚ್ಚರಿಸುತ್ತದೆ. ಇದಕ್ಕಾಗಿ ಎಲ್ಲರೂ ಪರಿಸರ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ಮೊಂತಿ ಹಬ್ಬವು ಬಾಲಿಕಾ ಮಾತೆ ಮರಿಯಮ್ಮನವರ ಭಿನ್ನಹಗಳ ಮೂಲಕ ಸರ್ವಜನರನ್ನು ಒಂದೇ ಕುಟುಂಬದ ಸದಸ್ಯರಂತೆ ಒಗ್ಗೂಡಿಸಲಿ. ಪೃಕೃತಿಮಾತೆಯ ಆರೈಕೆಯನ್ನು ಸವಿಯುವ ಎಲ್ಲರೂ ಪರಿಸರ ಸಂರಕ್ಷಣೆಗಾಗಿ ಗಂಭೀರ ಪ್ರಯತ್ನಗಳನ್ನು ನಡೆಸಲಿ.
ನಮ್ಮ ಜೀವನಶೈಲಿಯು ಬದಲಾಗಿ ಈ ಭೂಮಿಯ ಯೋಗ್ಯ ನಾಗರಿಕರನ್ನಾಗಿ ನಮ್ಮನ್ನು ಪರಿವರ್ತಿಸಲಿ. ಒಂದೇ ಕುಟುಂಬದ ಸದಸ್ಯರಂತೆ ಈ ಹಬ್ಬವನ್ನು ಆಚರಿಸುವಾಗ ಪೃಕೃತಿ ವಿಕೋಪದಿಂದ ಕಂಗೆಟ್ಟಿರುವ ಕೊಡಗು ಹಾಗು ಕೇರಳದ ಸಹೋದರ-ಸಹೋದರಿಯರಿಗಾಗಿ ನಮ್ಮ ಮನಗಳು ಮಿಡಿದು, ಹೃದಯವು ಔದಾರ್ಯತೆಯನ್ನು ತೋರಿಸಲಿ ಎಂದು ಅವರು ಸಂದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News