​ಅನ್ನಭಾಗ್ಯ ಯೋಜನೆಯ ಅಕ್ಕಿ ಖಾಸಗಿ ಗೋದಾಮಿಗೆ ಸಾಗಾಟ

Update: 2018-09-07 17:48 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಸೆ.7: ಸರಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿತರಿಸಲು ನೀಡುವ ಅನ್ನಭಾಗ್ಯ ಯೋಜನೆಯ ಸುಮಾರು 290 ಕ್ವಿಂಟಾಲ್ ಅಕ್ಕಿ ಹಾಗೂ 9 ಕ್ವಿಂಟಾಲ್ ಗೋದಿ ಖಾಸಗಿ ಗೋದಾಮಿಗೆ ಸಾಗಾಟವಾಗುತ್ತಿರುವುದು ಶುಕ್ರವಾರ ಮಂಗಳೂರಿನಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ಪತ್ತೆ ಹಚ್ಚಿದೆ. ಈ ಕಳ್ಳ ಸಾಗಾಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಆರೋಪ ವ್ಯಕ್ತವಾಗಿದೆ.

ಶಕ್ತಿನಗರದಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಗೋದಾಮಿನಿಂದ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಹಾಗೂ ಹಾಸ್ಟೆಲ್‌ಗಳಿಗೆ ಅಕ್ಕಿ ವಿತರಣೆಯಾಗುತ್ತದೆ. ಈ ಗೋದಾಮಿನಿಂದ ಅನ್ನಭಾಗ್ಯದ ಅಕ್ಕಿಯನ್ನು ಖಾಸಗಿಯಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಮಹಾನಗರ ಪಾಲಿಕೆ ಸದಸ್ಯ ದಿವಾಕರ್ ಅವರಿಗೆ ಮಾಹಿತಿ ಲಭಿಸಿತ್ತು.

ಇವರೊಂದಿಗೆ ನಾಗರಿಕ ಹಿತರಕ್ಷಣಾ ವೇದಿಕೆಯ ಹನುಮಂತ ಕಾಮತ್ ಮೊದಲಾದವರು ಕಾರ್ಯಾಚರಣೆ ನಡೆಸಿ ಪದವಿನಂಗಡಿ ಬಳಿ ಅಕ್ರಮವಾಗಿ ಅಕ್ಕಿ ಸಾಗಾಟದ ಲಾರಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಆಹಾರ ಇಲಾಖೆ ಅಧಿಕಾರಿಗಳನ್ನು ಕರೆಸಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಲಾರಿ ಚಾಲಕ ಅಸ್ಸಾಂನ ಮುಜರುಲ್ಲಾ, ಇಲ್ಯಾಸ್ ಹಾಗೂ ಮಂಜಲ್ಪಾದೆಯ ಗೋದಾಮು ಬಾಡಿಗೆಗೆ ಪಡೆದಿರುವ ದೇವದಾಸ ಭಟ್ ಅವರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓರ್ವ ಚಾಲಕ ತಪ್ಪಿಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News