ಕೊಡಗು-ಸಕಲೇಶಪುರದಲ್ಲಿ ಅತಿವೃಷ್ಟಿ : ಸಂತ್ರಸ್ತರಿಗೆ ಧರ್ಮಸ್ಥಳ ಕ್ಷೇತ್ರದಿಂದ 10 ಕೋ.ರೂ. ನೆರವು

Update: 2018-09-07 17:25 GMT

ಬೆಳ್ತಂಗಡಿ, ಸೆ.7: ಕೊಡಗು ಜಿಲ್ಲೆ ಹಾಗೂ ಇತರೆ ಪ್ರದೇಶಗಳಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 10 ಕೋ.ರೂ. ಪರಿಹಾರ ನೀಡುವುದಾಗಿ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶುಕ್ರವಾರ ಪ್ರಕಟಿಸಿದ್ದಾರೆ.

ಕೊಡಗು ಜಿಲ್ಲೆಯ ಮಳೆಹಾನಿ ಬಗ್ಗೆ ಅವರು ಇಂದು ವಿಶ್ಲೇಷಣೆ ನಡೆಸಿದರು. ಈ ಸಂದರ್ಭ ಕೊಡಗು ಜಿಲ್ಲೆಯ ನಿರ್ದೇಶಕ ಯೋಗೀಶ್ ಸರ್ವೇಕ್ಷಣೆ ವರದಿಯನ್ನು ನೀಡಿದರು. ಇಲ್ಲಿ ಸುಮಾರು 1,715 ಯೋಜನೆಯ ಕುಟುಂಬಗಳಿಗೆ ವ್ಯಾಪಕವಾಗಿ ಹಾನಿಯಾಗಿವೆ. ಇದರ ಆಧಾರದಲ್ಲಿ ಈ ನೆರವು ಪ್ರಕಟಿಸಲಾಗಿದೆ.

ಇಲ್ಲಿ ಸಂಪೂರ್ಣವಾಗಿ ಮನೆಗಳನ್ನು ಕಳೆದುಕೊಂಡವರಿಗೆ ತಲಾ 25 ಸಾವಿರ ರೂ., ನಿತ್ಯೋಪಯೋಗಿ ವಸ್ತುಗಳನ್ನು ಖರೀದಿಸಲು 1,335 ಮನೆಗಳಿಗೆ ತಲಾ 15,000 ರೂ., ಕೃಷಿ ನಷ್ಟ ಅನುಭವಿಸಿದ 1,117 ಕುಟುಂಬಗಳ ತಲಾ 25 ಸಾವಿರ ರೂ. ನೀಡುವುದಾಗಿ ಡಾ.ಹೆಗ್ಗಡೆ ತಿಳಿಸಿದ್ದಾರೆ.

ಅದೇ ರೀತಿ ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಅರಕಲಗೂಡು ಮತ್ತಿತರ ಪ್ರದೇಶಗಳಲ್ಲಿ ಹಾನಿಗೊಂಡಿರುವ ಕುಟುಂಬಗಳಿಗೆ ತಲಾ ರೂ.10,000 ನೀಡಲಾಗುತ್ತದೆ. ಇದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕವೇ ಅರ್ಹರಿಗೆ ತಲುಪಿಸಲಾಗುತ್ತದೆ.

ಮುಖ್ಯಮಂತ್ರಿ ಪರಿಹಾರನಿಧಿಗೆ 2 ಕೋ.ರೂ. :
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 6750 ಖಾಯಂ ಸಿಬ್ಬಂದಿ ತಮ್ಮ ಮೂರು ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದೆ. ಇದಕ್ಕೆ ಪೂರಕವಾಗಿ ಅಷ್ಟೇ ಮೊತ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇಣಿಗೆಯನ್ನು ಸೇರಿಸಿ ಒಟ್ಟಾರೆ ರೂ. ಎರಡು ಕೋಟಿ ರೂ.ಮುಖ್ಯಮಂತ್ರಿ ಕೊಡಗು ಪರಿಹಾರನಿಧಿಗೆ ಸಮರ್ಪಿಸುವುದಾಗಿಯೂ ಡಾ ಹೆಗ್ಗಡೆ ತಿಳಿಸಿದರು.

ಸ್ವಸಹಾಯ ಸಂಘ ಕಂತುಗಳ ಪಾವತಿಯಲ್ಲಿ ವಿರಾಮ :
ನೆರೆ ಸಂತ್ರಸ್ತರಾಗಿರುವ ಸ್ವಸಹಾಯ ಸಂಘಗಳ 1000 ಸದಸ್ಯರು ತಾವು ಪಡಕೊಂಡಿರುವ ಸ್ವಸಹಾಯ ಸಂಘಗಳ ಸಾಲಗಳನ್ನು ಮರುಪಾವತಿಸಲು ಸಾಧ್ಯವಿಲ್ಲದೇ ಇರುವುದರಿಂದ ಮರುಪಾವತಿ ಕಂತುಗಳನ್ನು 12 ವಾರಗಳವರೆಗೆ ಮುಂದೂಡಿ ಸಂಘದ ಅಧ್ಯಕ್ಷರು ಆದೇಶಿಸಿದ್ದಾರೆ.

ಸಭೆಯಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕಡಾ ಎಲ್. ಎಚ್.ಮಂಜುನಾಥ್, ಕರಾವಳಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಮೈಸೂರು ಪ್ರಾದೇಶಿಕ ನಿರ್ದೇಶಕ ಶ್ರೀಹರಿ, ಕೊಡಗುಜಿಲ್ಲೆ ನಿರ್ದೇಶಕ ಯೋಗೀಶ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News