ತನ್ನ ಮನೆಯೆಂದು ಪಕ್ಕದ ಮನೆಗೆ ಪ್ರವೇಶಿಸಿ ಅಲ್ಲಿದ್ದ ಯುವಕನ ಗುಂಡಿಕ್ಕಿ ಕೊಂದ ಮಹಿಳಾ ಪೊಲೀಸ್ ಅಧಿಕಾರಿ !

Update: 2018-09-08 12:20 GMT

ಡಲ್ಲಾಸ್, ಸೆ.8: ನಗರದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ರಾತ್ರಿ ತಮ್ಮ ಅಪಾರ್ಟ್‍ಮೆಂಟ್ ಎಂದು ತಿಳಿದುಕೊಂಡು ಪಕ್ಕದ ಅಪಾರ್ಟ್‍ಮೆಂಟಿಗೆ ಪ್ರವೇಶಿಸಿ ನೆರೆಮನೆಯ ವ್ಯಕ್ತಿಯನ್ನು ಕೊಂದ ಘಟನೆ ನಡೆದಿದೆ.

ಮಹಿಳಾ ಪೊಲೀಸ್ ಅಧಿಕಾರಿಯ ಗುಂಡೇಟಿಗೆ ಬಲಿಯಾದ ವ್ಯಕ್ತಿಯನ್ನು 26 ವರ್ಷದ ಬೋಥಂ ಜೀನ್ ಎಂದು ಗುರುತಿಸಲಾಗಿದೆ. ಘಟನೆಗಿಂತ ಮುಂಚೆ ಬೋಥಂ ಮತ್ತು ಪೊಲೀಸ್ ಅಧಿಕಾರಿಯ ನಡುವೆ ಏನಾದರೂ ಮಾತುಕತೆ ನಡೆದಿವೆಯೇ ಎಂಬುದು ತಿಳಿದು ಬಂದಿಲ್ಲ. ಆದರೆ ಪೊಲೀಸ್ ಇಲಾಖೆ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ನಿರ್ಧರಿಸಿದೆ.

ಆರೋಪಿ ಅಧಿಕಾರಿ ತನ್ನ ದಿನದ ಕರ್ತವ್ಯದ ಬಳಿಕ ಸಮವಸ್ತ್ರದಲ್ಲಿಯೇ ನಿವಾಸಕ್ಕೆ ಹಿಂದಿರುಗಿದ್ದಳು. ಆದರೆ ಸ್ವಲ್ಪ ಸಮಯದ ನಂತರ ಇಲಾಖೆಗೆ ಕರೆ ಮಾಡಿ ಆಕೆ ತಾನು ತನ್ನ ಮನೆಯೆಂದು ತಿಳಿದು ನೆರೆಮನೆ ಪ್ರವೇಶಿಸಿ ಅಲ್ಲಿದ್ದ ವ್ಯಕ್ತಿಯನ್ನು ಕೊಂದಿದ್ದಾಗಿ ತಿಳಿಸಿದ್ದಳು.

ಕೊಲೆಗೀಡಾದ ಜೀನ್  ಅಕೌಂಟಿಂಗ್ ಮತ್ತು ಕನ್ಸಲ್ಟಿಂಗ್ ಸಂಸ್ಥೆಯಲ್ಲಿ  ಕೆಲಸ ಮಾಡುತ್ತಿದ್ದ. ಘಟನೆ ನಡೆದಾಗ ಅಧಿಕಾರಿ ಮದ್ಯ ಅಥವಾ ಡ್ರಗ್ಸ್ ಅಮಲಿನಲ್ಲಿದ್ದಳೇ ಎಂದು ತಿಳಿಯಲು ಆಕೆಯ ರಕ್ತ ಪರೀಕ್ಷೆ ನಡೆಸಲಾಗಿದೆ.

ಆರೋಪಿ ಅಧಿಕಾರಿ ಜೀನ್ ಮನೆಯೊಳಗೆ ಹೇಗೆ ಪ್ರವೇಶಿಸಿದಳೆಂದು ತಿಳಿಯದಾಗಿದೆ. ಮನೆ ಬಾಗಿಲು ತೆರೆದೇ ಇತ್ತೇ ಎಂಬುದೂ ತಿಳಿದಿಲ್ಲ.  ಡಲ್ಲಾಸ್ ಪೊಲೀಸ್ ಮುಖ್ಯ ಕಾರ್ಯಾಲಯಕ್ಕಿಂತ ಅನತಿ ದೂರದಲ್ಲಿ ಈ ವಸತಿ ಸಮುಚ್ಛಯವಿದೆ.

ಕಟ್ಟಡದ ಎರಡನೇ ಮಹಡಿಯಲ್ಲಿ ವಾಸಿಸುವ  ಇಬ್ಬರು ಮಹಿಳೆಯರು ತಾವು ಗುರುವಾರ ರಾತ್ರಿ ಬಹಳಷ್ಟು ಸದ್ದು ಕೇಳಿದ್ದಾಗಿ ಪೊಲೀಸರು `ಬಾಗಿಲು ತೆರೆಯಿರಿ' ಎಂದು ಹೇಳುತ್ತಿರುವುದು ಕೇಳಿಸಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News