ಸೆ.10ರ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ; ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತ?

Update: 2018-09-08 12:59 GMT

ಮಂಗಳೂರು, ಸೆ.8: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಸೆ.10ರಂದು ದೇಶಾದ್ಯಂತ ಬಂದ್ ನಡೆಸುವಂತೆ ನೀಡಲಾದ ಕರೆಗೆ ದ.ಕ.ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಈಗಾಗಲೆ ವಿವಿಧ ಕಾರ್ಮಿಕ ಸಂಘಟನೆಗಳು ನಗರ ಮತ್ತು ಹೊರವಲಯದಲ್ಲಿ ಶಕ್ತಿ ಪ್ರದರ್ಶನ, ಜಾಥಾ ನಡೆಸಿದೆಯಲ್ಲದೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ. ಈ ಮಧ್ಯೆ ದ.ಕ.ಜಿಲ್ಲಾ ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘವು ಶನಿವಾರ ಪ್ರತ್ಯೇಕ ಸಭೆ ನಡೆಸಿ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಹಾಗಾಗಿ ದ.ಕ.ಜಿಲ್ಲೆಯ ಜೀವನಾಡಿಯಂತಿರುವ ಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದರೆ ಜಿಲ್ಲೆಯಲ್ಲಿ ಬಂದ್ ಯಶಸ್ವಿಯಾಗುವ ಸಾಧ್ಯತೆ ಇದೆ.

ಸಂಚಾರಕ್ಕೆ ಅಡ್ಡಿಯಾದರೆ ಬಸ್ ಸೇವೆ ಸ್ಥಗಿತಗೊಳಿಸಲು ಶನಿವಾರ ಮಂಗಳೂರಲ್ಲಿ ನಡೆದ ಬಸ್ ಮಾಲಕರ ಸಂಘದ ಸಭೆಯು ನಿರ್ಣಯ ಕೈಗೊಂಡಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡನೀಯ. ಮಿತಿಮೀರಿದ ಏರಿಕೆಯಿಂದ ಬಸ್‌ಗಳ ಸಂಚಾರ ಅಸಾಧ್ಯವಾಗಿದೆ. ಬಸ್ ಮಾಲಕರು ನಷ್ಟದಲ್ಲಿ ಸಂಚಾರ ನಡೆಸುವಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆಗಾಗ ಡೀಸೆಲ್ ಬೆಲೆ ಏರಿಕೆಯಾದರೆ ಸಾರಿಗೆ ವ್ಯವಸ್ಥೆ ನಿರ್ವಹಣೆ ಸಾಧ್ಯವಿಲ್ಲ. ಹಾಗಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ಆಳ್ವ ಹಾಗೂ ಪ್ರಧಾನ ಕಾರ್ಯಾದರ್ಶಿ ಪ್ರಕಾಶ್ ಶೇಖ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವ ಮತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಈಗಾಗಲೆ ನಗರಾದ್ಯಂತ ಜನಜಾಗೃತಿ ಜಾಥಾ ನಡೆಸಲಾಗಿದೆ. ಮಾಜಿ ಸಚಿವ ರಮಾನಾಥ ರೈ ಕೂಡಾ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಯುವ ಕಾಂಗ್ರೆಸ್ ಕೂಡಾ ಕಾರ್ಯ ಕರ್ತರನ್ನು ಬಂದ್ ಯಶಸ್ವಿಗೆ ಸಜ್ಜುಗೊಳಿಸುತ್ತಿವೆ. ರವಿವಾರ ಕಾಂಗ್ರೆಸ್‌ನ ಕೆಲವು ಘಟಕಗಳು ತುರ್ತು ಸಭೆ ಕರೆದಿದೆ.

ಕಾಂಗ್ರೆಸ್ ಪಕ್ಷ ನೀಡಿದ ಬಂದ್ ಕರೆಗೆ ಎಡಪಕ್ಷಗಳು ಕೂಡಾ ಬೆಂಬಲ ನೀಡಿದ್ದು, ಸೆ.10ರಂದು ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದೆ. ತನ್ಮಧ್ಯೆ ಕೆಲವು ರಿಕ್ಷಾ ಸಂಘಟನೆಗಳು ಕೂಡಾ ಬಂದ್‌ಗೆ ಬೆಂಬಲ ಘೋಷಿಸಿವೆ.

ಜೆಡಿಎಸ್ ಬೆಂಬಲ: ಈ ಮಧ್ಯೆ ದ.ಕ.ಜಿಲ್ಲಾ ಜೆಡಿಎಸ್ ಕೂಡಾ ಬಂದ್‌ಗೆ ಬೆಂಬಲ ನೀಡಿವೆ. ಪಕ್ಷದ ಕಾರ್ಯಕರ್ತರು ಸೆ.10ರ ಬಂದ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.

ಪೂರ್ವ ವಲಯ ಬಸ್ ಮಾಲಕರ ಒಕ್ಕೂಟ: ಸೆ.10ರಂದು ನೀಡಲಾದ ಭಾರತ್ ಬಂದ್ ಕರೆಗೆ ನೈತಿಕ ಬೆಂಬಲ ನೀಡುವುದಾಗಿ ಪೂರ್ವ ವಲಯ ಸಿಟಿ ಮತ್ತು ಸರ್ವಿಸ್ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ. ಡೀಸೆಲ್ ದರ ಏರಿಕೆಯಿಂದ ಬಸ್ ಸಂಚಾರ ನಡೆಸಲು ಅಸಾಧ್ಯ ವಾಗಿದೆ. ಬಸ್ ನಿರ್ವಹಣಾ ವೆಚ್ಚವು ಗಣನೀಯವಾಗಿದೆ. ಇದರಿಂದ ಬಸ್ ಸಾರಿಗೆ ಉದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಿವೈಎಫ್‌ಐ: ಎಡಪಕ್ಷಗಳ ಸಹಿತ ವಿರೋಧ ಪಕ್ಷಗಳು ಕರೆಯನ್ವಯ ನಡೆಯುವ ಸೆ.10ರ ಭಾರತ್ ಬಂದ್ ಯಶಸ್ವಿಗೊಳಿಸುವಂತೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.

ಬಂದ್ ಕರೆ ರಾಜಕೀಯ ಪ್ರೇರಿತ: ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು ಸೆ.10ರಂದು ನೀಡಿರುವ ಬಂದ್ ಕರೆಯು ರಾಜಕೀಯ ಪ್ರೇರಿತವಾಗಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ. ಇಂಧನ ಬೆಲೆ ಜಾಗತಿಕ ಮಾರುಕಟ್ಟೆಯ ಆಧಾರದಲ್ಲಿ ಏರಿಳಿತವಾಗುತ್ತಿರುವುದು ಸಾಮಾನ್ಯ. ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದರೂ ರಾಜ್ಯದ ಕಾಂಗ್ರೆಸ್-ಜನತಾ ದಳ ಮೈತ್ರಿ ಸರಕಾರ ಇಂಧನ ಬೆಲೆಯಲ್ಲಿ ಕಳೆದ ಬಾರಿ 2 ರೂ. ಹೆಚ್ಚಿಸಿ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ. ಈ ಸಂದರ್ಭ ಕಣ್ಣು ಮುಚ್ಚಿ ಕುಳಿತ ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣಾ ದೃಷ್ಟಿಯಿಂದ ಸೆ.10ರಂದು ಬಂದ್‌ಗೆ ಕರೆ ಕೊಟ್ಟಿರುವುದು ರಾಜಕೀಯ ಪ್ರೇರಿತ ಎಂದು ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News