ಮಂಗಳೂರು ಅಭಿವೃದ್ಧಿ: ಮುಖ್ಯಮಂತ್ರಿಗೆ ಶಾಸಕ ಕಾಮತ್ ಮನವಿ

Update: 2018-09-08 13:02 GMT

ಮಂಗಳೂರು, ಸೆ. 8: ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕ ಡಿ. ವೇದವ್ಯಾಸ ಕಾಮತ್ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಶುಕ್ರವಾರ ಲಿಖಿತ ಮನವಿ ಸಲ್ಲಿಸಿದರು.

ಸ್ಮಾರ್ಟ್ ಸಿಟಿಯ ಭಾಗ್ಯ ಮಂಗಳೂರಿಗೆ ಒಲಿದಿದೆ. ಆದರೆ ಸಮರ್ಪಕವಾಗಿ ಅದು ಅನುಷ್ಟಾನಕ್ಕೆ ತರುವ ಪ್ರಕ್ರಿಯೆ ರಾಜ್ಯ ಸರಕಾರದ ಕಡೆಯಿಂದ ನಿಧಾನವಾಗಿ ನಡೆಯುತ್ತಿದೆ. ಇಲ್ಲಿಯ ತನಕ ಸ್ಮಾರ್ಟ್ ಸಿಟಿ ಯೋಜನೆಗೆ ಪೂರ್ಣ ಪ್ರಮಾಣದ ಎಂಡಿ, ಎಸ್‌ಪಿವಿ ನೇಮಕ ಆಗಿಲ್ಲ. ಈ ಯೋಜನೆಯಡಿ ನಿರ್ವಹಿಸಿರುವ ಕಾಮಗಾರಿಗಳ ಯೋಜನಾ ವೆಚ್ಚ, ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಕಾಲಮಿತಿಯಡಿ ಯೋಜನೆ ಪೂರ್ಣಗೊಳಿಸಲು ತ್ವರಿತಗತಿಯಲ್ಲಿ ಯೋಜನೆ ಅನುಷ್ಟಾನ ಮಾಡಬೇಕಿದೆ. ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ನಿರ್ಮಾಣ, ಮಂಗಳಾ ಕ್ರೀಡಾಂಗಣದಲ್ಲಿ ಸಾಕಷ್ಟು ಅವ್ಯವಸ್ಥೆ ಇದ್ದು ಅಲ್ಲಿ ಕ್ರೀಡಾಪಟುಗಳ ಅನುಕೂಲತೆಗಾಗಿ ಸಮಗ್ರ ಅಭಿವೃದ್ಧಿ ಆಗಬೇಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಸುರಿದ ಭಾರೀ ಮಳೆಗೆ ನೂರಾರು ಮನೆಗಳು ಭಾಗಶ: ಧ್ವಂಸ, ಮನೆಯ ಆವರಣ ಗೋಡೆ, ಕಟ್ಟಡಗಳ ತಡೆಗೋಡೆಗಳು ಕುಸಿದಿರುವುದು ಮತ್ತು ಸಾರ್ವಜನಿಕ ಸೊತ್ತುಗಳಿಗೆ ಅಪಾರ ಹಾನಿ ಸಂಭವಿಸಿದೆ. ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿದಾಗ ಸುಮಾರು 50 ಕೋ.ರೂ. ನಷ್ಟದ ಅಂದಾಜು ಮಾಡಲಾಗಿದೆ. ಇದರೊಂದಿಗೆ ಮಂಗಳೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವ, ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಉತ್ಸವ ಮತ್ತು ಸಾರ್ವಜನಿಕ ಸಂಚಾರಕ್ಕೆ ರಸ್ತೆಗಳಲ್ಲಿ ಬಿದ್ದಿರುವ ಹೊಂಡ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಳ್ಳಲು ಕೂಡ ಅನುದಾನದ ಬಿಡುಗಡೆ ಮಾಡಬೇಕಿದೆ. ಈ ಎಲ್ಲಾ ಕಾಮಗಾರಿಗಳಿಗೆ ಮತ್ತು ಬೃಹತ್ ಒಳಚರಂಡಿ ನಿರ್ಮಾಣ ಸೇರಿ ಕನಿಷ್ಟ 50 ಕೋ.ರೂ.ವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ 900 ಸಾಮಾನ್ಯ ಬೆಡ್ ಮತ್ತು ಐಸಿಯುನಲ್ಲಿ 12 ಬೆಡ್‌ಗಳಿವೆ. ಐಸಿಯುನಲ್ಲಿ ಕನಿಷ್ಟ 100 ಬೆಡ್‌ಗಳನ್ನು ಹಾಕಬೇಕಿದೆ. ಆರೋಗ್ಯ ಕರ್ನಾಟಕ ಕಾರ್ಡ್ ಯೋಜನೆಯ ಸೌಲಭ್ಯ ಜನಸಾಮಾನ್ಯರಿಗೆ ಸಿಗಲಿರುವ ಸಮಸ್ಯೆಯನ್ನು ಹೋಗಲಾಡಿಸಬೇಕು. ತುರ್ತು ಸಂದರ್ಭದಲ್ಲಿ ರೋಗಿಗಳು, ಅಪಘಾತಕ್ಕೆ ಒಳಗಾದ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸುವ ಅಗತ್ಯ ಇರುತ್ತದೆ. ಆಗ ರೋಗಿಗಳ ಸಂಬಂಧಿಕರಿಗೆ ವೆನ್‌ಲಾಕ್ ಆಸ್ಪತ್ರೆಯಲ್ಲಿ ಕೂಡಲೇ ರೆಫೆರೆನ್ಸ್ ಕಾರ್ಡ್ ಸಿಗುವ ವ್ಯವಸ್ಥೆ ಆಗಬೇಕು. ಆರೋಗ್ಯ ಕರ್ನಾಟಕದ ಮಾಹಿತಿಗಾಗಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಕೌಂಟರ್ ತೆರೆಯಬೇಕಿದೆ ಎಂದು ಮನವಿ ಮಾಡಲಾಗಿದೆ.

ಯಾಂತ್ರೀಕೃತ ನಾಡದೋಣಿಗಳಿಗೆ ಸಬ್ಸಿಡಿ ದರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಕ ಸೀಮೆ ಎಣ್ಣೆಯನ್ನು ಪೂರೈಸಲಾ ಗುತ್ತಿತ್ತು. ಆದರೆ ಈ ಬಾರಿ ಅದನ್ನು ಮೀನುಗಾರಿಕಾ ಇಲಾಖೆಯ ಮೂಲಕ ನೀಡಲಾಗುತ್ತಿದೆ. ಈಗಾಗಲೇ ಮೀನುಗಾರಿಕಾ ಇಲಾಖೆಗೆ ನೀಡಿರುವ ಅನುದಾನವನ್ನು ಸರಕಾರ ಕಡಿತ ಮಾಡಿರುವುದರಿಂದ ಮೀನುಗಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಬ್ಸಿಡಿ ದರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಸೀಮೆಎಣ್ಣೆ ವಿತರಿಸಲು ಅವಕಾಶ ಮಾಡಿಕೊಡಬೇಕು.

ಕಂದಾಯ ಇಲಾಖೆಯಲ್ಲಿ 11ಇ ಸಹಿತ ಅನೇಕ ವಿಷಯಗಳ ಕುರಿತು ಜಿಲ್ಲೆಯ ನಾಗರಿಕರು ಅನುಭವಿಸುತ್ತಿರುವ ತೊಂದರೆಗಳನ್ನು ಕಂದಾಯ ಸಚಿವ ಆರ್.ವಿ. ದೇಶಪಾಂಡೆಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಗಮನಹರಿಸಬೇಕು. ಮನಪಾದಲ್ಲಿರಬೇಕಾದ 1,725 ಸಿಬ್ಬಂದಿಯ ಪೈಕಿ 1,084 ಹುದ್ದೆಗಳು ಖಾಲಿ ಇವೆ. ಇದರಿಂದ ಜನಸಾಮಾನ್ಯರ ಅಗತ್ಯದ ಕೆಲಸಗಳು ನಡೆಯದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News