ಅಶ್ರಫ್ ಸಾಲೆತ್ತೂರು ಬಂಧನ ಪ್ರಕರಣ: ಸೂಕ್ತ ಕ್ರಮಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಆಗ್ರಹ

Update: 2018-09-08 13:06 GMT

ಮಂಗಳೂರು, ಸೆ. 8: ಕೇರಳದಲ್ಲಿ ಸಂಭವಿಸಿದ ನೆರೆ ಹಾವಳಿಯ ವಿಚಾರದಲ್ಲಿ ಅಶ್ರಫ್ ಸಾಲೆತ್ತೂರು ಎಂಬವರು ಫೇಸ್‌ಬುಕ್‌ನಲ್ಲಿ ವ್ಯಕ್ತಪಡಿಸಿದ ಅನಿಸಿಕೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿ ಬಂಧಿಸಿದ ಬಂದರು ಪೊಲೀಸ್ ಇನ್‌ಸ್ಪೆಕ್ಟರ್ ಕಾರ್ಯವೈಖರಿಯನ್ನು ಪ್ರಶ್ನಿಸಿ ಕರಾವಳಿ ವಲಯ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ನಿಯೋಗವು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರನ್ನು ಭೇಟಿಯಾಗಿ ತಪ್ಪಿತಸ್ಥ ಪೊಲೀಸ್ ಅಧಿಕಾರಿ ಸಹಿತ ಪೊಲೀಸರ ವಿರುದ್ಧ ವಿಚಾರಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿತು.

ಸ್ವಾತಂತ್ರ್ಯ ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಕೂಡಾ ಈ ದೇಶದ ಸಂವಿಧಾನದಲ್ಲಿ ಪ್ರಜೆಗೆ ಕೊಟ್ಟಿರುವ ಅವಕಾಶವಾಗಿದೆ. ಇದನ್ನು ಕಸಿದುಕೊಳ್ಳುವ ಹಕ್ಕು ಯಾವುದೇ ಇಲಾಖೆ ಅಥವಾ ಅಧಿಕಾರಿಗಳಿಗೆ ಇಲ್ಲ ಎನ್ನುವುದನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳಲು ಇಷ್ಟಪಡುತ್ತೇವೆ. ಒಂದು ವೇಳೆ ಪ್ರಕರಣ ದಾಖಲಿಸಲು ಅತಿಯಾದ ಆಸಕ್ತಿ ಹೊಂದಿದಲ್ಲಿ ಮಂಗಳೂರಿನಲ್ಲಿ ಕೋಮು ವಿಷಬೀಜ ಬಿತ್ತುವ ಮುಖಾಂತರ ಕೋಮು ಸಾಮರಸ್ಯ ಕದಡುವ ನಾಯಕರು ಇಂದಿಗೂ ಬೀದಿಯಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಸಮಾಜದ ಸಾಮರಸ್ಯ ಕಾಪಾಡುವ ಕೆಲಸ ನಡೆಯಲಿ ಹಾಗೂ ಮುಂದಕ್ಕೆ ಇಂತಹ ಯಾವುದೇ ಘಟನೆಗಳು ನಡೆಯದಂತೆ ಮೇಲಾಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ನಿಯೋಗ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.

ನಿಯೋಗದಲ್ಲಿ ಕರಾವಳಿ ವಲಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯು.ಬಿ. ಸಲೀಂ, ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಕಾರ್ಪೊರೇಟರ್ ಅಬ್ದುಲ್ ರವೂಫ್, ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ, ಪಕ್ಷದ ನಾಯಕರಾದ ರಫೀಕ್ ಇ.ಕೆ., ಹನೀಫ್ ಜೋಕಟ್ಟೆ, ಸಂಶುದ್ಧೀನ್ ಬಂದರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News