ಬ್ಯಾಂಕ್ ಸಾಲ ವಂಚನೆ: ಇಂದುಮತಿ ರಿಫೈನರೀಸ್ ಮೇಲೆ ಇಡಿ ದಾಳಿ

Update: 2018-09-08 13:09 GMT

ಹೊಸದಿಲ್ಲಿ, ಸೆ.8: ಇಂದುಮತಿ ರಿಫೈನರೀಸ್ ಪ್ರೈವೇಟ್ ಲಿಮಿಟೆಡ್ ಶಾಮೀಲಾಗಿರುವ ಸುಮಾರು 90 ಕೋಟಿ ರೂ. ಬ್ಯಾಂಕ್ ಸಾಲ  ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಜಾರಿ ನಿರ್ದೇಶನಾಲಯವು ಶನಿವಾರ ತಮಿಳುನಾಡಿನ ಒಂಬತ್ತು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.

ಸಂಸ್ಥೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ರೂ 90 ಕೋಟಿ ನಷ್ಟ ಉಂಟು ಮಾಡಿದೆ ಎಂದು  ಹೇಳಲಾಗಿದೆ. ವಿರುಧುನಗರ್,  ಮಧುರೈ, ಕೊಯಂಬತ್ತೂರಿನಲ್ಲಿ ಶೋಧನೆ ಮುಂದುವರಿದಿದ್ದು, ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯಿದೆಯನ್ವಯ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಕಂಪೆನಿಯನ್ನು ನಿರ್ವಹಿಸುತ್ತಿರುವ ಆರ್ ಶೆನ್ಬಗನ್ ಅವರಿಗೆ ಸಂಬಂಧಿಸಿದ ಕಚೇರಿ ಕಟ್ಟಡಗಳ ಮೇಲೆ ದಾಳಿ ನಡೆದಿವೆ.

``ಇಂದುಮತಿ ರಿಫೈನರೀಸ್ ಪ್ರೈ ಲಿ. ಸಂಸ್ಥೆಯು ಕ್ಯಾಶ್ ಕ್ರೆಡಿಟ್, ಲೆಟರ್ ಆಫ್ ಕ್ರೆಡಿಟ್ ಸೌಲಭ್ಯ ಹಾಗೂ  ಚೆನ್ನೈನಲ್ಲಿರುವ ಎಸ್‍ಬಿಐನ ಸಾಗರೋತ್ತರ ಶಾಖೆಯಿಂದ ಟರ್ಮ್ ಸಾಲ ಪಡೆದಿತ್ತು. ಅದು ಸುಮಾರು ರೂ 87.36 ಕೋಟಿ ಮೌಲ್ಯದ ಒಟ್ಟು 46 ಲೆಟರ್ ಆಫ್ ಕ್ರೆಡಿಟ್‍ಗಳನ್ನು ಎಸ್‍ಬಿಐನಿಂದ ಬೋಗಸ್ ಸಂಸ್ಥೆಗಳ /ನಕಲಿ ಇನ್ ವೈಸ್ ಮೂಲಕ ಪಡೆದಿತ್ತು ಹಾಗೂ ನಂತರ ಸಂಸ್ಥೆಯ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ಬ್ಯಾಂಕಿಗೆ ಒಟ್ಟು ಸುಮಾರು ರೂ 90 ಕೋಟಿ ನಷ್ಟ ಉಂಟಾಗಿತ್ತು'' ಎಂದು ಜಾರಿ ನಿರ್ದೇಶನಾಲಯ ತನ್ನ ದೂರಿನಲ್ಲಿ ಹೇಳಿದೆ.

ಸಿಬಿಐ ಆರ್ ಶೆನ್ಬಗನ್ ವಿರುದ್ಧ ದಾಖಲಿಸಿದ ಎಫ್‍ಐಆರ್ ಹಾಗೂ ದೋಷಾರೋಪ ಪಟ್ಟಿಯ ಆಧಾರದಲ್ಲಿ  ಕಂಪೆನಿಯ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News