ಗಾಂಧಿಯನ್ನು ಕೊಂದವರೇ ಗೌರಿಯನ್ನು ಕೊಂದಿರುವುದು ಸ್ಪಷ್ಟ: ಜಿ. ರಾಜಶೇಖರ್

Update: 2018-09-08 14:15 GMT

ಉಡುಪಿ, ಸೆ.8: ಅಂದು ಗಾಂಧೀಜಿಯನ್ನು ಕೊಂದವರೇ ಇಂದು ನರೇಂದ್ರ ದಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್‌ರನ್ನು ಕೊಂದಿದ್ದಾರೆ. ಗೌರಿ ಹತ್ಯೆಯ ಆರೋಪಿಗಳ ಚರಿತ್ರೆಯನ್ನು ಅವಲೋಕಿಸಿದಾಗ ಅವರ ಬೇರುಗಳು ಸಂಘಪರಿವಾರದಲ್ಲಿ ಆಳವಾಗಿ ಬೇರೂ ರಿರುವುದು ಸ್ಪಷ್ಟವಾಗಿದೆ ಎಂದು ಹಿರಿಯ ಚಿಂತಕ ಹಾಗೂ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಹೇಳಿದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ ಮತ್ತು ಸಹಭಾಗಿ ಸಂಘಟನೆಗಳು ಉಡುಪಿ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಹುತಾತ್ಮ ಸೈನಿಕ ಸ್ಮಾರಕದ ಬಳಿ ಶನಿವಾರ ಹಮ್ಮಿಕೊಳ್ಳಲಾದ ಗೌರಿ ಸಂಸ್ಮರಣೆ-ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.

ಈ ಎಲ್ಲ ಕೊಲೆಗಳು ಸಾವರ್ಕರ್ ಪ್ರಣೀತ ಆರೆಸ್ಸೆಸ್ ಸಿದ್ಧಾಂತ ಪ್ರಕಾರ ನಡೆದಿವೆ. ಅದೇ ಸಿದ್ಧಾಂತವು ದೇಶದಲ್ಲಿ ಸಾವಿರಾರು ಅಮಾಯಕರ ಮುಸ್ಲಿಮರ ಹತ್ಯೆಗೂ ಕಾರಣವಾಗಿದೆ. ರಾಮ ಜನ್ಮಭೂಮಿ ಚಳವಳಿ, ಅಡ್ವಾಣಿ ರಥ ಯಾತ್ರೆ, ಬಾಬರಿ ಮಸೀದಿ ದ್ವಂಸ, ಮುಂಬೈ ಗಲಭೆ, ಗುಜರಾತ್ ಗಲಭೆ, ಕಂದಮಾಲ್ ಸೇರಿದಂತೆ ಹಲವು ಸರಣಿ ಹತ್ಯಾಕಾಂಡದಲ್ಲಿ ಸಾವಿರಾರು ಮಂದಿ ಈ ಸಿದ್ಧಾಂತಕ್ಕೆ ಬಲಿಯಾಗಿದ್ದಾರೆ ಎಂದರು.

ದೇಶದಲ್ಲಿ ಹಿಂದುತ್ವ ಸಿದ್ಧಾಂತ ಸಾವಿರಾರು ಅಮಾಯಕರ ಕೊಲೆಗೆ ಕಾರಣವಾಗಿದೆ. ಅಮಾಯಕರ ಕೊಲೆಯ ವಾತಾವರಣದಲ್ಲೇ ಈ ಬುದ್ದಿಜೀವಿಗಳ ಕೊಲೆ ಕೂಡ ನಡೆದಿದೆ. ಆದುದರಿಂದ ಬುದ್ದಿಜೀವಿಗಳ ಕೊಲೆಯೊಂದಿಗೆ ಈ ಅಮಾಯಕರ ಕೊಲೆಯನ್ನು ಕೂಡ ಖಂಡಿಸಬೇಕಾಗಿದೆ ಎಂದು ಅವರು ಹೇಳಿದರು.

ದಸಂಸ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರಕ್ಕೆ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಸರಕಾರದ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಸನಾತನ ಸಂಸ್ಥೆಗಳು ದಲಿತರು, ಅಲ್ಪಸಂಖ್ಯಾತರನ್ನು ಮಟ್ಟ ಹಾಕುವ ಕಾರ್ಯಕ್ಕೆ ಕೈ ಹಾಕಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಂಬೈಯ ಹೋರಾಟಗಾರ ಸಂದೇಶ್ ಭಂಡಾರಿ ಮಾತನಾಡಿ, ಇಂದು ದೇಶದಲ್ಲಿ ಸಂವಿಧಾನ ಅಪಾಯದಲ್ಲಿ ಇದೆ. ಇದರ ವಿರುದ್ಧ ಪ್ರತಿಯೊಬ್ಬರು ಮನೆಯಿಂದ ಹೊರಬಂದು ಹೋರಾಟ ನಡೆಸಬೇಕು ಎಂದು ಹೇಳಿದರು.

ಧರ್ಮಗುರು ಫಾ. ವಿಲಿಯಂ ಮಾರ್ಟಿಸ್, ಜಮಾಅತೆ ಇಸ್ಲಾಮೀ ಹಿಂದ್‌ನ ಇದ್ರೀಸ್ ಹೂಡೆ, ಪುಣೆಯ ನಟ ಅಲೋಕ್ ರಾಜ್‌ವಾಡೆ, ಉಪನ್ಯಾಸಕ ಪ್ರೊ.ಹಯವದನ ಮೂಡಸಗ್ರಿ, ಬರಹಗಾರ ಸಂವರ್ತ್ ಸಾಹಿಲ್, ಚಿಂತಕ ಪ್ರೊ.ಫಣಿರಾಜ್ ಮಾತನಾಡಿದರು.

ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಎಸ್.ಎಸ್.ಪ್ರಸಾದ್, ಶ್ಯಾಮ್ ರಾಜ್ ಬಿರ್ತಿ, ವಾಸು ನೇಜಾರು, ವೆಲ್‌ಫೇರ್ ಪಾರ್ಟಿಯ ಅಬ್ದುಲ್ ಅಝೀಝ್ ಉದ್ಯಾವರ, ಡಿ.ಎಸ್.ಬೆಂಗ್ರೆ, ಕೆಥೋಲಿಕ್ ಸಭಾದ ರಾಬರ್ಟ್ ಮಿನೇಜಸ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News