ಸೆ.10ರ ಭಾರತ್ ಬಂದ್‌ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕರೆ

Update: 2018-09-08 14:32 GMT

ಉಡುಪಿ, ಸೆ.8: ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದಲ್ಲದೇ, ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನ ಬೆಲೆಯನ್ನು ನಿಯಂತ್ರಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಫಲವಾದ ಹಿನ್ನೆಲೆಯಲ್ಲಿ ಅದರ ಜನವಿರೋಧಿ ನೀತಿಗಳನ್ನು ಖಂಡಿಸಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಕರೆ ನೀಡಿರುವ ಸೆ.10ರ ಭಾರತ್ ಬಂದ್‌ಗೆ ಬೆಂಬಲ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಉಡುಪಿ ಜಿಲ್ಲೆಯ ಜನರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ತೋನ್ಸೆ, ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇಂಧನ ಬೆಲೆ ದಾಖಲೆ ರೀತಿಯಲ್ಲಿ ಏರಿಕೆ ಕಾಣುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ತಲುಪಿದ್ದು, ಜನಸಾಮಾನ್ಯರ ಬದುಕು ಇನ್ನಷ್ಟು ದುಸ್ಥರವಾಗುತ್ತಿದೆ ಎಂದಿದ್ದಾರೆ.

ಇನ್ನೊಂದೆಡೆ ಕೇಂದ್ರ ಸರಕಾರದ ಅಸಮರ್ಪಕ ಆರ್ಥಿಕ ನೀತಿಯಿಂದ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯುತ್ತಿದೆ. ರೂಪಾಯಿ ಮೌಲ್ಯ ಇದೇ ವೇಗದಲ್ಲಿ ಕುಸಿದರೆ ಪೆಟ್ರೋಲ್ ರೂ.100 ಗಡಿಗೆ ತಲುಪುವ ಸಾದ್ಯತೆ ಇದ್ದು ಬೆಲೆ ಏರಿಕೆಯ ನಾಗಾಲೋಟಕ್ಕೆ ಕಡಿವಾಣ ಹಾಕಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗಲೂ ದೇಶದಲ್ಲಿ ತೈಲಬೆಲೆಯನ್ನು ಕೇಂದ್ರ ಸರಕಾರ ಕಡಿಮೆ ಮಾಡಿಲ್ಲ. ತೈಲ ಬೆಲೆ ಏರಿಕೆಯಿಂದ ಕೇಂದ್ರ ಸರಕಾರ 11 ಲಕ್ಷ ಕೋಟಿ ರೂ. ಸಂಗ್ರಹಿಸಿದೆ. ತೈಲಬೆಲೆ ನಿತ್ಯ ಪರಿಷ್ಕರಣೆ ಯಾಗುವ ಪದ್ದತಿ ಪ್ರಾರಂಭ ಆದಂದಿನಿಂದ ಸರಕಾರಕ್ಕೆ ಲಾಭವಾಗಿದ್ದರೂ ತೈಲ ದರ ಇಳಿಕೆ ಮಾಡದೇ ಜನತೆಯ ಹೊರೆಯನ್ನು ನೀಗಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆನ್ನುವ ಬೇಡಿಕೆಗೂ ಕೇಂದ್ರ ಮನ್ನಣೆ ನೀಡುತ್ತಿಲ್ಲ ಎಂದವರು ದೂರಿದ್ದಾರೆ.

ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು 4 ವರ್ಷ ಕಳೆದರೂ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗದೆ ಜನರ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಪೆಟ್ರೊಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದ್ದು ಜನಸಾಮಾನ್ಯರ ಬದುಕು ದುಸ್ಥರವಾಗಿದೆ. ಕೇಂದ್ರ ಸರಕಾರದ ಈ ಜನವಿರೋಧಿ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಸೆ.10 ರಂದು ಸರ್ವ ಪ್ರತಿಪಕ್ಷಗಳ ಸಹಕಾರದೊಂದಿಗೆ ಸ್ವಯಂಪ್ರೇರಿತ ಭಾರತ್ ಬಂದ್‌ಗೆ ಕರೆ ನೀಡಿದ್ದು, ಬಂದ್‌ಗೆ ಬೆಂಬಲವಾಗಿ ಜಿಲ್ಲೆಯ ಎಲ್ಲಾ ವಾಣಿಜ್ಯ ವ್ಯಾಪಾರಸ್ಥರು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಬಂದ್ ಆಚರಿಸಿ ಪ್ರತಿಭಟನೆ ಸೂಚಿಸಬೇಕೆಂದು ಜನಾರ್ದನ ತೋನ್ಸೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಬಸ್ ಸೇವೆ ಸ್ಥಗಿತ ?

ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕರೆ ನೀಡಿರುವ ಸೆ.10ರ ಭಾರತ ಬಂದ್‌ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆನರಾ ಬಸ್ ಮಾಲಕರ, ಚಾಲಕರ ಸಂಘ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಅಂದು ಜಿಲ್ಲೆಯ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಇಂಧನ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ವಿಫಲವಾದ ಹಿನ್ನೆಲೆಯಲ್ಲಿ ಜನಸಾಮಾನ್ಯರಲ್ಲಿ ಕೇಂದ್ರ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಅಂದು ಅವಿಭಜಿತ ಜಿಲ್ಲೆಗಳಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ಬಸ್ ಮಾಲಕರ ಸಂಘಗಳು ನಿರ್ಧರಿಸಿವೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವಮರ್ ಬಲ್ಲಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News