ಬಂಟ್ವಾಳ ಪುರಸಭೆಯ ಮೀಸಲಾತಿ ಪ್ರಕಟ: ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಿಗೆ ?

Update: 2018-09-08 14:36 GMT

ಬಂಟ್ವಾಳ, ಸೆ. 8: ಬಂಟ್ವಾಳ ಪುರಸಭೆಯ ಚುನಾವಣೆಯಲ್ಲಿ ಅತಂತ್ರ ಫಲಿತಾಂಶದ ಮೂಲಕ ಯಾವ ಪಕ್ಷ ಅಧಿಕಾರ ನಡೆಸುತ್ತೆ ಎನ್ನುವ ಜನರ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.

ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯಿಂದ ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಬಂಟ್ವಾಳ ಪುರಸಭೆ ಅಧಿಕಾರ ಕಾಂಗ್ರೆಸ್ ಪಾಲಾಗಿದೆ. ರಾಜ್ಯ ಸರಕಾರದ ಮೀಸಲಾತಿ ಮಾರ್ಪಾಡಿನಿಂದ ಮೊದಲ ಬಾರಿಗೆ ಪುರಸಭೆ ಪ್ರವೇಶಿಸಿದ ಕಾಂಗ್ರೆಸ್‍ನ ಜನಾರ್ದನ ಚೆಂಡ್ತಿಮಾರ್ ಅಧ್ಯಕ್ಷ ಸ್ಥಾನದ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆಯಿದೆ.

ಎರಡನೇ ಮಾರ್ಪಡು ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಎಂಬ ಬದಲಾವಣೆ ಪ್ರಕಟವಾಗುತ್ತಿದ್ದಂತೆಯೇ ಕೈ ಪಾಳಯದಲ್ಲಿ ಭಾರೀ ಹರ್ಷ ವ್ಯಕ್ತವಾ ಗಿದೆ. ಮೊದಲ ಮೀಸಲಾತಿ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಇದನ್ನು ಎಸ್ಸಿ ಅಭ್ಯರ್ಥಿಗೆ ಬದಲಾವಣೆ ಮಾಡಿದ್ದು, ಈ ಮೂಲಕ ಕಾಂಗ್ರೆಸ್ ಪಕ್ಷದ ಸದಸ್ಯರು ಆಡಳಿತ ನಡೆಸಲು ಹಸಿರು ನಿಶಾನೆ ಸಿಕ್ಕಿದಂತಾಗಿದೆ. 

ಅತಂತ್ರ ಫಲಿತಾಂಶ:

27 ವಾರ್ಡ್‍ಗಳ ಪುರಸಭೆಯಲ್ಲಿ ಅಧಿಕಾರ ನಡೆಸಲು 14 ಸ್ಥಾನಗಳನ್ನು ಗಳಿಸಿದ ಪಕ್ಷಕ್ಕೆ ಅವಕಾಶವಿತ್ತಾದರೂ ಇಲ್ಲಿ ಕಾಂಗ್ರೆಸ್ 12 ಹಾಗೂ ಬಿಜೆಪಿ 11 ಸ್ಥಾನವನ್ನು ಮಾತ್ರ ಪಡೆದಿತ್ತು. ಇದರ ಮಧ್ಯೆ ಎಸ್‍ಡಿಪಿಐ 4 ಸ್ಥಾನಗಳನ್ನು ಗೆದ್ದುಕೊಂಡು ನಿರ್ಣಾಯಕವಾಗಿತ್ತು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳದೆ ಕುತೂಹಲ ಮೂಡಿಸಿದ್ದ ಪುರಸಭೆಗೆ ಮೀಸಲಾತಿಯ ಬದಲಾವಣೆಯ ಮೂಲಕ ಅಂತಿಮವಾದ ಉತ್ತರ ಸಿಕ್ಕಿದೆ.

ಬಿಜೆಪಿಯಲ್ಲಿ ಎಸ್ಸಿ ಸದಸ್ಯರಿಲ್ಲ:

11 ಸ್ಥಾನವನ್ನು ಪಡೆದಿದ್ದ ಬಿಜೆಪಿ ಕೂಡ ಪುರಸಭೆಯ ಆಡಳಿತ ನಡೆಸುವ ಸಲುವಾಗಿ ತೆರೆಮರೆಯ ಪ್ರಯತ್ನ ನಡೆಸುತ್ತಿತ್ತು. ಆದರೆ ಕೊನೆ ಕ್ಷಣದ ಈ ಮೀಸಲಾತಿಯಿಂದ ಬಿಜೆಪಿ ವಲಯದಲ್ಲಿ ಬೇಸರ ಮೂಡಿಸಿದೆ. ಬಿಜೆಪಿಯಲ್ಲಿ ಎಸ್ಸಿ ಸದಸ್ಯರಿಲ್ಲದೇ ಇರುವುದೇ ಇವರಿಗೆ ನುಂಗಲಾರದ ತುತ್ತಾಗಿದೆ. ಹಾಗಾಗಿ ಉದ್ದೇಶ ಪೂರ್ವಕವಾಗಿ ಈ ಮೀಸಲಾತಿಯ ನ್ನು ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News