ದಕ್ಷಿಣ ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಉಗ್ರನ ಹತ್ಯೆ

Update: 2018-09-08 14:40 GMT

ಜಮ್ಮುಕಾಶ್ಮೀರ, ಸೆ. 8: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಅಚಾಬಾಲ್ ಪ್ರದೇಶದಲ್ಲಿ ಶುಕ್ರವಾರ ತಡ ರಾತ್ರಿ ಪ್ರಮುಖ ಭಯೋತ್ಪಾದಕ ದಾಳಿಯನ್ನು ಹಿಮ್ಮೆಟ್ಟಿಸಿರುವ ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಲಷ್ಕರೆ ತಯ್ಯಿಬದ ಉಗ್ರನೋರ್ವನನ್ನು ಹತ್ಯೆಗೈದಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಪೊಲೀಸರೊಬ್ಬರು ಗಾಯಗೊಂಡಿದ್ದಾರೆ. ಈ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ಬಾರೀ ಪ್ರಮಾಣದ ಶಶ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರರು ಅಚಾಬಾಲ್‌ನಲ್ಲಿರುವ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದರು. ಈ ದಾಳಿಯನ್ನು ಕರ್ತವ್ಯ ದಲ್ಲಿದ್ದ ಯೋಧರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು. ‘‘ಪ್ರತಿ ದಾಳಿಯಲ್ಲಿ ಉಗ್ರನೋರ್ವ ಹತನಾದ. ದಾಳಿ ನಡೆದ ಸ್ಥಳದಲ್ಲಿ ಶಸ್ತ್ರಾಸ್ತಗಳು ಪತ್ತೆಯಾಗಿವೆ’’ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

 ಹತ ಉಗ್ರನನ್ನು ಕುಲ್ಗಾಂವ್ ಜಿಲ್ಲೆಯ ಟಾಟ್ರಿಪೋರಾ ಯರಿಪೋರಾದ ಬಿಲಾಲ್ ಅಹ್ಮದ್ ಎಂದು ಗುರುತಿಸಲಾಗಿದೆ. ಬಿಲಾಲ್ ಅಹ್ಮದ್ ಮೂರು ತಿಂಗಳ ಹಿಂದೆ ಲಷ್ಕರೆ ತಯ್ಯಿಬ ಸಂಘಟನೆಗೆ ಸೇರಿದ್ದ. ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಯೋಧನನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News