ಭಾರತ, ಚೀನಾಗಳಿಗೆ ಸಬ್ಸಿಡಿ ನಿಲ್ಲಿಸುವೆ: ಟ್ರಂಪ್

Update: 2018-09-08 15:12 GMT

 ಶಿಕಾಗೊ, ಸೆ. 8: ಭಾರತ ಮತ್ತು ಚೀನಾಗಳಂಥ ಅಭಿವೃದ್ಧಿಶೀಲ ದೇಶಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಗಳನ್ನು ತಾನು ನಿಲ್ಲಿಸಲು ಬಯಸುತ್ತೇನೆ, ಯಾಕೆಂದರೆ ಅಮೆರಿಕವೂ ‘ಅಭಿವೃದ್ಧಿಶೀಲ ದೇಶ’ವಾಗಿದ್ದು, ಅದು ಬೇರೆ ದೇಶಗಳಿಗಿಂತ ಹೆಚ್ಚಿನ ವೇಗದಲ್ಲಿ ಅಭಿವೃದ್ಧಿ ಹೊಂದಬೇಕೆಂದು ತಾನು ಬಯಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ನಾರ್ತ್ ಡಕೋಟದ ಫಾರ್ಗೊ ನಗರದಲ್ಲಿ ನಿಧಿ ಸಂಗ್ರಹ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚೀನಾ ಬೃಹತ್ ಆರ್ಥಿಕ ಶಕ್ತಿಯಾಗಲು ವಿಶ್ವ ವ್ಯಾಪಾರ ಸಂಘಟನೆ (ಡಬ್ಲುಟಿಒ) ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು.

‘‘ಅಭಿವೃದ್ಧಿಶೀಲ ದೇಶಗಳೆಂದು ಕರೆಯಲಾಗುವ ಕೆಲವು ದೇಶಗಳಿವೆ. ಕೆಲವು ದೇಶಗಳು ಇನ್ನೂ ಪ್ರಬುದ್ಧತೆಗೆ ಬಂದಿಲ್ಲ. ಹಾಗಾಗಿ, ನಾವು ಅವುಗಳಿಗೆ ಸಬ್ಸಿಡಿಗಳನ್ನು ನೀಡುತ್ತಿದ್ದೇವೆ. ಇದು ಹುಚ್ಚುತನ. ಭಾರತ, ಚೀನಾದಂಥ ದೇಶಗಳು ಹಾಗೂ ಇತರ ದೇಶಗಳು ‘ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತಿವೆ’ ಎಂದು ನಾವು ಹೇಳುತ್ತಿದ್ದೇವೆ’’ ಎಂದು ಟ್ರಂಪ್ ನುಡಿದರು.

  ಆ ದೇಶಗಳು ತಮ್ಮನ್ನು ತಾವು ಅಭಿವೃದ್ಧಿಶೀಲ ದೇಶಗಳೆಂದು ಕರೆದುಕೊಳ್ಳುತ್ತಿವೆ ಹಾಗೂ ಈ ವಿಭಾಗದಲ್ಲಿ ಅವುಗಳಿಗೆ ಸಬ್ಸಿಡಿಗಳು ದೊರೆಯುತ್ತಿವೆ’’ ಎಂದರು.

‘‘ನಾವು ಅವುಗಳಿಗೆ ಹಣ ನೀಡಬೇಕಾಗಿದೆ. ಈ ಇಡೀ ವ್ಯವಸ್ಥೆ ಹುಚ್ಚುತನದ್ದಾಗಿದೆ. ನಾವು ಅದನ್ನು ನಿಲ್ಲಿಸುತ್ತೇವೆ. ನಾವು ಅದನ್ನು ನಿಲ್ಲಿಸಿದ್ದೇವೆ’’ ಎಂದು ಅಮೆರಿಕ ಅಧ್ಯಕ್ಷ ಹೇಳಿದರು.

‘‘ನಾವು ಕೂಡ ಅಭಿವೃದ್ಧಿಹೊಂದುತ್ತಿರುವ ದೇಶವೇ ಆಗಿದ್ದೇವೆ. ಸರಿಯಾ? ನನ್ನ ಪ್ರಕಾರ, ನಾವು ಕೂಡ ಅಭಿವೃದ್ಧಿಹೊಂದುತ್ತಿರುವ ದೇಶ. ಅಭಿವೃದ್ದಿಹೊಂದುತ್ತಿರುವ ದೇಶಗಳ ವಿಭಾಗದಲ್ಲೇ ನಮ್ಮ ದೇಶವೂ ಬರಬೇಕು. ಇತರ ದೇಶಗಳಿಗಿಂತ ಹೆಚ್ಚಿನ ವೇಗದಲ್ಲಿ ನಾವು ಬೆಳೆಯಲಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News