ಟ್ರಕ್ ಕಂಡಕ್ಟರ್‌ಗೆ ಮಾರಣಾಂತಿಕ ಹಲ್ಲೆ: ಸೂಚನೆ ನೀಡದೆ ಫೈನಾನ್ಸ್‌ನಿಂದ ವಾಹನ ಜಪ್ತಿ ಆರೋಪ

Update: 2018-09-08 16:28 GMT

ಮಂಗಳೂರು, ಸೆ.8: ಟ್ರಕ್ ಕಂಡಕ್ಟರ್‌ಗೆ ಫೈನಾನ್ಸ್‌ವೊಂದರ ವಾಹನ ಜಪ್ತಿ ಮಾಡುವವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಪಡುಬಿದ್ರೆ ಪಾಲಿಮಾರು ನಿವಾಸಿ, ಕಂಡಕ್ಟರ್ ಶೌಕತ್ (23) ಹಲ್ಲೆಗೊಳಗಾದವರು. ಹಲ್ಲೆ ನಡೆಸಿದ ನಾಲ್ವರು ಆರೋಪಿಗಳು ಮಂಗಳೂರಿನವರು ಎಂದು ತಿಳಿದುಬಂದಿದೆ.

ಸೆ.7ರಂದು ಕೇರಳಕ್ಕೆ ಮೀನು ಸಾಗಿಸಿ ಮಲ್ಪೆಗೆ ಹೊರಟಿದ್ದ ಟ್ರಕ್ ಕೋಲ್‌ನಾಡು ಸಮೀಪಿಸುತ್ತಿತ್ತು. ಈ ವೇಳೆ ಮಲ್ಪೆಯ ಮುರುಗಪ್ಪ ಗ್ರೂಪ್‌ನ ಚೋಳಮಂಡಲಂ ಫೈನಾನ್ಸ್‌ನ ನಾಲ್ವರು ವಾಹನ ಜಪ್ತಿ ಮಾಡುವವರು ಎರಡು ಕಾರುಗಳಲ್ಲಿ ಬಂದು ವಾಹನವನ್ನು ಅಡ್ಡಗಟ್ಟಿದ್ದಾರೆ. ಮೀನಿನ ಟ್ರಕ್‌ನ ಲೋನ್ ಕಂತು ಬಾಕಿಯಿದ್ದು, ವಾಹನ ಜಪ್ತಿ ಮಾಡಲಾಗುವುದು ಎಂದು ಹೇಳಿ ಟ್ರಕ್‌ನ್ನು ಚಲಾಯಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಪಣಂಬೂರು ಬಳಿ ಡಿಸೇಲ್ ಖಾಲಿಯಾಗಿದೆ ಎಂದು ಹೇಳಿ ವಾಹನ ನಿಲ್ಲಿಸಿದ್ದಾರೆ. ಟ್ರಕ್‌ನಿಂದ ಕೆಳಗಿಳಿದು ಟ್ರಕ್‌ನ ಚಾಲಕ ಪಡುಬಿದ್ರೆಯ ರಾಜೇಶ್ (22) ಬಳಿಯಿದ್ದ 70 ಸಾವಿರ ರೂ. ನಗದು, 12 ಗ್ರಾಂ ಚಿನ್ನ ಹಾಗೂ ಟ್ರಕ್‌ನಲ್ಲಿದ್ದ 240 ಮೀನಿನ ಬಾಕ್ಸ್, ವಾಹನದ ಆರ್‌ಸಿ ಸೇರಿದಂತೆ ಟ್ರಕ್‌ನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಡಿಸೇಲ್ ಟ್ಯಾಂಕ್‌ನ ಬೀಗದಿಂದ ಕಂಡಕ್ಟರ್ ಶೌಕತ್ ಮೂಗಿಗೆ ಬಲವಾಗಿ ಹೊಡೆದು, ಎಳೆದೊಯ್ದು ಕಾರಿಗೆ ದೂಡಿದ್ದಾರೆ. ಈ ವೇಳೆ ರಾಜೇಶ್ ಪ್ರಾಣಭಯದಿಂದ ಹೆದರಿ ಪರಾರಿಯಾಗಿದ್ದಾರೆ. ಆನಂತರ ಶೌಕತ್‌ನನ್ನು ನಿಂದಿಸಿ, ಕೊಲ್ಲುವ ಉದ್ದೇಶದಿಂದ ಮರದ ತುಂಡು, ಕಬ್ಬಿಣದ ರಾಡ್‌ಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಗೊಂಡ ಶೌಕತ್ ರನ್ನು ಹಲ್ಲೆ ನಡೆಸಿದ ಆರೋಪಿಗಳೇ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ, ಪರಾರಿಯಾಗಿದ್ದಾರೆ.  ಗಾಯಾಳು ಶೌಕತ್‌ನನ್ನು ಪೋಷಕರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಮೂಗಿಗೆ ಹೊಲಿಗೆ ಹಾಕಿಸಿದ್ದು, ನಂತರ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. 

ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಾನು ಮುಸ್ಲಿಂ ಎಂದ ತಕ್ಷಣ ಹಲ್ಲೆ: ಸಂತ್ರಸ್ತ ಶೌಕತ್

ಪೊಲೀಸ್ ಸ್ಟೇಶನ್‌ಗೆ ಟ್ರಕ್‌ನ್ನು ತೆಗೆದುಕೊಂಡು ಹೋಗುವುದಾಗಿ ಹೇಳಿ, ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ ಡಿಸೇಲ್ ಹಾಕಿಸೋಣವೆಂದು ಪಣಂಬೂರುನಲ್ಲಿ ವಾಹನ ನಿಲ್ಲಿಸಿದರು. ಈ ವೇಳೆ ವಾಹನದ ಮಾಲಕರು ತಾವಲ್ಲ. ಬಿಟ್ಟುಬಿಡಿ ಎಂದು ಶೌಕತ್ ಹೇಳಿದ್ದಾರೆ. ಈ ವೇಳೆ ಆರೋಪಿಗಳು ನಿನ್ನ ಹೆಸರು ಏನು ಎಂದು ಪ್ರಶ್ನಿಸಿದರು. ಆಗ ತಾನು ಶೌಕತ್ ಎಂದು ಹೇಳಿದೆ. ಬಳಿಕ ಚಾಲಕನ ಹೆಸರನ್ನು ಕೇಳಿದಾಗ ರಾಜೇಶ್ ಎಂದು ಹೇಳಿದೆ. ತಾನು ಮುಸ್ಲಿಂ ಎನ್ನುವುದು ಖಾತ್ರಿಯಾದ ಕೂಡಲೇ ಮುಖಕ್ಕೆ ಹೊಡೆದರು. ಆಗ ರಕ್ತ ಸುರಿಯತೊಡಗಿತು. ಬಳಿಕ ಆರೋಪಿಗಳು ಆಸ್ಪತ್ರೆಗೆ ದಾಖಲಿಸಿ, ಪರಾರಿಯಾದರು ಎಂದು ಹಲ್ಲೆಗೊಳಗಾದ ಟ್ರಕ್‌ನ ಕಂಡಕ್ಟರ್ ಶೌಕತ್ ಆರೋಪಿಸಿದ್ದಾರೆ.

ಮೀನು ಸಾಗಾಟದ ಟ್ರಕ್ ಕಂಡಕ್ಟರ್‌ನನ್ನು ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದರು. ನಾಲ್ವರೂ ಆರೋಪಿಗಳು ಮಂಗಳೂರಿನವರು ಎನ್ನುವ ಮಾಹಿತಿಯಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಹಲ್ಲೆ ಪ್ರಕರಣದ ತನಿಖೆಯನ್ನು ನಡೆಸಲಾಗುತ್ತಿದೆ.

- ರಫೀಕ್ ಕೆ.ಎಂ., ಪೊಲೀಸ್ ಇನ್‌ಸ್ಪೆಕ್ಟರ್, ಪಣಂಬೂರು 

‘ಫೈನಾನ್ಸ್‌ನಿಂದ ಸೂಚನೆ ನೀಡದೆ ವಾಹನ ಜಪ್ತಿ’

ಮಲ್ಪೆಯ ಮುರುಗಪ್ಪ ಗ್ರೂಪ್‌ನ ಚೋಳಮಂಡಲಂ ಫೈನಾನ್‌ನ್ಸ್‌ನಿಂದ ಮೀನು ಸಾಗಾಟಕ್ಕೆಂದು ಆರು ಗಾಲಿಯ ಟ್ರಕ್‌ನ್ನು ಲೋನ್ ಮಾಡಿ ತೆಗೆದುಕೊಂಡಿದ್ದೇವು. ಟ್ರಕ್‌ನ ಹಲವು ಕಂತುಗಳನ್ನು ಪಾವತಿಸಿದ್ದೇವು. ಆದರೆ, ಕಳೆದ ಬಾರಿಯ ಕಂತನ್ನು ಪಾವತಿಸಿರಲಿಲ್ಲ. ಫೈನಾನ್ಸ್‌ನಿಂದ ಯಾವುದೇ ಸೂಚನೆ ನೀಡದೇ ಏಕಾಏಕಿ ಟ್ರಕ್, ಟ್ರಕ್‌ನಲ್ಲಿದ್ದ 240 ಮೀನಿನ ಬಾಕ್ಸ್, ವಾಹನದ ಆರ್‌ಸಿ ಸೇರಿದಂತೆ ಟ್ರಕ್‌ನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಟ್ರಕ್‌ನ ಮಾಲಕ ಪುನೀತ್ ಮಲ್ಪೆ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News