ಗಾಪಂ ನೌಕರರ ಹೋರಾಟ ಯಶಸ್ವಿ: ಕೆಲವು ಬೇಡಿಕೆಗಳಿಗೆ ಸರಕಾರ ಸಮ್ಮತಿ

Update: 2018-09-08 17:03 GMT

ಉಡುಪಿ, ಸೆ. 8: 18,000 ರೂ. ಕನಿಷ್ಟ ವೇತನ, ಸರಕಾರದಿಂದ ನೇರ ವೇತನ ನೀಡಿಕೆ, ಕಾರ್ಯದರ್ಶಿ-2 ಹುದ್ದೆಗೆ ಭಡ್ತಿ, ಕಂಪ್ಯೂಟರ್ ಆಪರೇಟರ್‌ಗಳ ಹೊಸ ನೇಮಕಾತಿಗೆ ತಡೆ, ಪಿಎಫ್, ಗ್ರಾಚ್ಯುಯಿಟಿ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆ, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಯಶಸ್ವಿ ಮಾತುಕತೆ ನಡೆುವುದರ ಮೂಲಕ ಕೊನೆಗೊಂಡಿದೆ.

ಮೊದಲ ಹಂತದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾರ್ಯದರ್ಶಿ ಸಾವಿತ್ರಿ, ನಿರ್ದೇಶಕರಾದ ಕೆಂಪೇಗೌಡ ಹಾಗೂ ಕರಾ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಮತ್ತು ಪ್ರಧಾನ ಕಾರ್ಯದರ್ಶಿ ಎಂ. ಬಿ. ನಾಡಗೌಡ ಮತ್ತಿತರ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಯಿತು.

ಎರಡನೇ ಹಂತದಲ್ಲಿ ಸಚಿವ ಕೃಷ್ಣೇ ಭೈರೇಗೌಡ ಹಾಗೂ ಇಲಾಖೆಯ ಇತರೇ ಅಧಿಕಾರಿಗಳೊಂದಿಗೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆ ಯಲ್ಲಿ ಈ ಕೆಳಗಿನ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಒಪ್ಪಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ (ಸಿಐಟಿಯು)ದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸರಕಾರದಿಂದ ನೇರ ವೇತನ ಪಾವತಿಗೆ, ವಯಸ್ಸು ಮತ್ತು ನೇಮಕಾತಿಗೆ ಸಂಬಂಧಿಸಿ ಸರಿಯಾದ ದಾಖಲೆಗಳಿಲ್ಲ ಎಂದು 18000ಕ್ಕೂ ಹೆಚ್ಚು ನೌಕರರಿಗೆ ನೇರ ವೇತನ ನೀಡಿಕೆ ತಡೆ ಹಿಡಿದ ಕುರಿತು ಚರ್ಚೆ ನಡೆದು ಗ್ರಾಪಂ ನಿರ್ಣಯ, ಹಾಜರಾತಿ ಮತ್ತು ವೇತನ ನೀಡಿಕೆ ದಾಖಲೆಗಳನ್ನು ಒದಗಿಸಿದಲ್ಲಿ ವೇತನ ನೀಡಿಕೆಗೆ ಒಪ್ಪಲಾಗಿದೆ.

ಸಮರ್ಪಕವಾದ ವಯಸ್ಸಿನ ದಾಖಲೆ ಲಭ್ಯವಿಲ್ಲದಿದ್ದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಗಳ ನೇತೃತ್ವದ ಆರೋಗ್ಯ ಇಲಾಖಾ ಸಮಿತಿ ನೀಡುವ ವಯಸ್ಸು ದೃಢೀಕರಣ ಪತ್ರವನ್ನು ದಾಖಲೆಯನ್ನಾಗಿ ಪರಿಗಣಿಸಲು ಸರಕಾರ ಒಪ್ಪಿಕೊಂಡಿದೆ. ಕಾರ್ಯದರ್ಶಿ ಹುದ್ದೆ ಭಡ್ತಿಗೆ ಸಂಬಂಧಿಸಿದಂತೆ 2004ಕ್ಕಿಂತಲೂ ಮೊದಲು ಸೇವೆಗೆ ಸೇರಿದವರಿಗೆ ಕನಿಷ್ಟ ವಿದ್ಯಾರ್ಹತೆ ಎಸೆಸೆಲ್ಸಿ ಎಂದು ಪರಿಗಣಿಸಲು ಅಧಿಕಾರಿಗಳ ಮಟ್ಟದಲ್ಲಿ ಒಪ್ಪಿಕೊಂಡಿದ್ದು, ಸಚಿವ ಸಂಪುಟದ ಒಪ್ಪಿಗೆಯನ್ನು ಕೂಡಲೇ ಪಡೆದು ಭಡ್ತಿ ನೀಡಲು ಸಮ್ಮತಿಸಲಾಯಿತು.

ನಗರಸಭೆಯ ನೌಕರರಿಗೆ ಇರುವಂತೆ ಸೇವಾ ನಿಯಮಾವಳಿಯನ್ನು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಅಂತಿಮಗೊಳಿಸಲು ಒಪ್ಪಲಾಯಿತು. ಪಿಎಫ್ ಜಾರಿಯ ಬಗ್ಗೆ ಗ್ರಾಪಂ ಒಂದು ಘಟಕ ಎಂದು ಪರಿಗಣಿಸಲಿದ್ದು, ನಿವೃತ್ತಿಯ ನಂತರ ಗರಿಷ್ಟ 15 ತಿಂಗಳ ವೇತನವನ್ನು ಗ್ರಾಚ್ಯುವಿಟಿಯಾಗಿ ಕಡ್ಡಾಯವಾಗಿ ನೀಡಬೇಕೆಂದು ನಿರ್ಧರಿಸಲಾಗಿದೆ.

ಇದು ತಮ್ಮ ಹೋರಾಟಕ್ಕೆ ಸಿಕ್ಕಿದ ಐತಿಹಾಸಿಕ ವಿಜಯ ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ ರಾಜ್ಯ ಸಮಿತಿ ಭಾವಿಸಿದ್ದು ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News