ಉಡುಪಿ ಜಿಲ್ಲಾದ್ಯಂತ ಅಡಿಕೆ ಕೊಳೆರೋಗ; ಪರಿಹಾರಕ್ಕೆ ಭಾಕಿಸಂ ಆಗ್ರಹ

Update: 2018-09-08 17:07 GMT

ಉಡುಪಿ, ಸೆ.8: ಜಿಲ್ಲೆಯಲ್ಲಿ ಈ ಬಾರಿ ನಿರಂತರವಾಗಿ ಸುರಿದ ಮಳೆಯ ಪರಿಣಾಮ ಅಡಿಕೆ ತೋಟಗಳಲ್ಲಿ ವಿಪರೀತ ಕೊಳೆ(ಮಹಾಳಿ)ರೋಗ ಕಾಣಿಸಿ ಕೊಂಡು ಎಳೆ ಅಡಿಕೆಗಳೆಲ್ಲಾ ಮರದಿಂದ ಉದುರಿ ಬೀಳಲು ಪ್ರಾರಂಭವಾಗಿದ್ದು, ಇದರಿಂದ ರೈತರಿಗೆ ಅಪಾರ ಕಷ್ಟ-ನಷ್ಟಗಳುಂಟಾಗಿವೆ. ಇದಕ್ಕೆ ರಾಜ್ಯ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಒತ್ತಾಯಿಸಿದೆ.

ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಭಾಕಿಸಂ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗಿಯಿತು.

ಈಗಾಗಲೇ ಎರಡೆರಡು ಬಾರಿ ಬೋರ್ಡೋ ದ್ರಾವಣದ ಸಿಂಪರಣೆ ಮಾಡಲಾಗಿದ್ದರೂ, ಅತೀವ ಮಳೆ ಹಾಗೂ ತಣ್ಣಗಿನ ವಾತಾವರಣದಿಂದ ಈ ರೋಗ ಅಡಿಕೆ ತೋಟಗಳಲ್ಲಿ ಉಲ್ಬಣಗೊಂಡಿದೆ. ಅಡಿಕೆಗೆ ಉತ್ತಮ ಧಾರಣೆ ಇರುವಾಗ ಫಸಲನ್ನು ಉಳಿಸಿಕೊಳ್ಳಲು ರೈತರು ಹರಸಾಹಸಪಡುವಂತಾಗಿದೆ. ಬಹಳಷ್ಟು ತೋಟಗಳಲ್ಲಿ ಶೇ.25ರಿಂದ 40ರಷ್ಟು ಫಸಲು ಉದುರಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ರೈತು ತಮ್ಮ ಅಳಲು ತೋಡಿಕೊಂಡರು.

ವಿಪರೀತ ಮಳೆಯಿಂದ ಕಾಳು ಮೆಣಸಿನ ಬಳ್ಳಿಗಳೂ ಕಾಯಿ ಕಚ್ಚುತ್ತಿಲ್ಲ. ಈಗಾಗಲೇ ಬಿಟ್ಟ ಕರೆಗಳೆಲ್ಲವೂ ಉದುರುತ್ತಿವೆ. ತೆಂಗಿನ ಮರಗಳಲ್ಲೂ ಎಳೆ ಮಿಳ್ಳೆಗಳು ಉದುರಲು ಪ್ರಾರಂಭವಾಗಿದೆ. ಇಲ್ಲೂ ಎಳೆ ಕಾಯಿಗಳು ಉದುರಿ ಬೀಳುತ್ತಿವೆ. ತೆಂಗಿನ ಬೊಂಡವನ್ನು ಈವರೆಗೆ ಮಂಗಗಳು ಮಾತ್ರ ತಿನ್ನುವ ಬಗ್ಗೆ ದೂರು ಬರುತ್ತಿತ್ತು. ಈಗ ಕುಂದಾಪುರದ ಹೆಮ್ಮಾಡಿ, ಹಾಲಾಡಿ, ಉಡುಪಿಯ ಕಾಪು ಮೊದಲಾದ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಬಾವಲಿಗಳು ತೆಂಗಿನ ಎಳೆ ಕಾಯಿಗಳನ್ನು ತಿನ್ನಲು ಪ್ರಾರಂಭಿಸಿವೆ ಎಂದು ರೈತರು ದೂರಿದರು.

ಜಿಲ್ಲೆಯಲ್ಲಿ ಅತೀವ ಮಳೆಯಿಂದ ರೈತರಿಗಾದ ನಷ್ಟವನ್ನು ಸರಕಾರ ತುಂಬಿಸಿ ಕೊಡಬೇಕು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ಸಭೆ ತೀರ್ಮಾನಿಸಿತು. ಜೊತೆಗೆ ಅಡಿಕೆಕೊಳೆ ರೋಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ನಷ್ಟ ಅನುವಿಸಿದ ರೈತರಿಗೆ ಪರಿಹಾರ ನೀಡಬೇಕು ಎಂದು ಸಂಘ ಕರೆಕೊಟ್ಟಿದೆ.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಉಪಾಧ್ಯಕ್ಷರಾದ ರಾಮಚಂದ್ರ ಅಲ್ಸೆ, ಸದಾನಂದ ಶೆಟ್ಟಿ, ಕುಂದಾಪುರ ತಾಲೂಕಿನ ಸೀತಾರಾಮ ಗಾಣಿಗ, ವೆಂಕಟೇಶ್ ರಾವ್, ಸೂರಪ್ಪಂಡಾರಿ, ಉಡುಪಿ ತಾಲೂಕಿನ ಆಸ್ತೀಕ ಶಾಸ್ತ್ರೀ, ಪಾಂಡುರಂಗ ಹೆಗ್ಡೆ, ರಾಮಚಂದ್ರ ಪೈ, ಸುಜನ್ ಮನೋರಾಜ್, ಸಂತೋಷ್ ಶೆಟ್ಟಿ, ಕಾರ್ಕಳ ತಾಲೂಕಿನ ವಿಶ್ವನಾಥ ಶೆಟ್ಟಿ, ಸುಂದರ ಶೆಟ್ಟಿ, ಅನಂತ್ ಭಟ್, ಪಾಂಡುರಂಗ ನಾಯಕ್, ಕೆ.ಪಿ ಂಡಾರಿ ಮೊದಲಾದವರು ಉಪಸ್ಥಿತರಿದ್ದರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News