'ಲಿವರ್ ವೈಫಲ್ಯದಿಂದ ಶಿರೂರು ಸ್ವಾಮೀಜಿ ಸಹಜ ಸಾವು'

Update: 2018-09-08 17:36 GMT

ಉಡುಪಿ, ಆ.8: ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯನ್ನು ಮಣಿಪಾಲ ಕೆಎಂಸಿಯ ವೈದ್ಯರು ಸೆ. 7ರಂದು ಪೊಲೀಸರಿಗೆ ಒಪ್ಪಿಸಿದ್ದು, ಇದರಲ್ಲಿ ಶಿರೂರು ಸ್ವಾಮೀಜಿ ಲಿವರ್ ವೈಫಲ್ಯತೆಯಿಂದ ಸಹಜವಾಗಿ ಸಾವನ್ನಪಿದ್ದಾರೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ (ಎಫ್‌ಎಸ್‌ಎಲ್)ಯ ಪ್ರಕಾರ ಸ್ವಾಮೀಜಿಯ ದೇಹದಲ್ಲಿ ಯಾವುದೇ ವಿಷದ ಅಂಶ ಪತ್ತೆಯಾಗಿಲ್ಲ. ಅನ್ನನಾಳ ದಲ್ಲಿ ರಕ್ತಸ್ರಾವ ಉಂಟಾಗಿ, ಲಿವರ್ ವೈಫಲ್ಯ (ಕ್ರೋನಿಕ್ ಲೀವರ್ ಸಿರೋ ಸಿಸ್) ದಿಂದ ಸ್ವಾಮೀಜಿ ಮೃತಪಟ್ಟಿರುವುದಾಗಿ ಈ ಅಂತಿಮ ವರದಿಯಲ್ಲಿ ತಿಳಿಸಲಾಗಿದೆ. ಈ ಮೂಲಕ ಸ್ವಾಮೀಜಿಯ ಸಾವಿನಲ್ಲಿ ಉಂಟಾಗಿದ್ದ ಹಲವು ಊಹಾಪೋಹಗಳಿಗೆ ಅಂತಿಮ ತೆರೆ ಎಳೆದಂತಾಗಿದೆ.

ತೀವ್ರ ಅಸ್ವಸ್ಥಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿ ಜು.19ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯಾಧಿಕಾರಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಶಿರೂರು ಸ್ವಾಮೀಜಿಯ ರಕ್ತದಲ್ಲಿ ವಿಷದ ಅಂಶ ಪತ್ತೆಯಾಗಿರುವುದಾಗಿ ತಿಳಿಸಿದ್ದರು. ಇದರಿಂದ ಸ್ವಾಮೀಜಿಯ ಸಾವಿನ ಬಗ್ಗೆ ಸಾಕಷ್ಟು ಸಂಶಯಗಳು ವ್ಯಕ್ತವಾಗಿದ್ದವು.

ಈ ಕುರಿತು ಅವರ ಸಹೋದರ ಲಾತವ್ಯ ಆಚಾರ್ಯ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಸ್ವಾಮೀಜಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರುವ ಮೊದಲು ಉಳಿದುಕೊಂಡಿದ್ದ ಹಿರಿಯಡ್ಕದ ಶಿರೂರು ಮೂಲಮಠವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಅವರು ಸೇವಿಸಿದ ಆಹಾರ, ಕೋಣೆಗಳನ್ನು ಪರಿಶೀಲನೆ ನಡೆಸಲಾಗಿತ್ತು. ಅಲ್ಲದೆ ಎರಡು ಬಾರಿ ಮೂಲಮಠಕ್ಕೆ ಆಗಮಿಸಿದ್ದ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಹಲವು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿತ್ತು.

ಈ ಮಧ್ಯೆ ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿಯನ್ನು ಮಣಿಪಾಲ ಆಸ್ಪತ್ರೆಯವರು ಜು.30ರಂದು ಪೊಲೀಸರಿಗೆ ಒಪ್ಪಿಸಿದ್ದು, ಇದರಲ್ಲಿ ಅಂತಿಮ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಬಂದ ನಂತರವೇ ನೀಡಲಾಗುವುದು ಎಂದು ಹೇಳಲಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯ ಮಂಗಳೂರು ಪ್ರಾದೇಶಿಕ ಕಚೇರಿಯ ತಜ್ಞರು ಈ ವರದಿಯನ್ನು ಆ. 21ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಒಪ್ಪಿಸಿದರು.

ಈ ವರದಿಯನ್ನು ಮಣಿಪಾಲ ತಜ್ಞ ವೈದ್ಯರ ತಂಡವು ಕೂಲಂಕಷವಾಗಿ ಅಧ್ಯಯನ ನಡೆಸಿ, ಇದೀಗ ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ಅದನ್ನು ಸೆ.7ರಂದು ಪ್ರಕರಣದ ತನಿಖಾಧಿಕಾರಿಯಾಗಿರುವ ಕಾರ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ಅವರಿಗೆ ಒಪ್ಪಿಸಿದ್ದಾರೆ. ಇದು ಸಹಜ ಸಾವು ಆಗಿರುವುದರಿಂದ ಈ ವರದಿಯನ್ನು ಪೊಲೀಸರು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಭೂಬಾಲನ್ ಅವರಿಗೆ ನೀಡಿದ್ದಾರೆ.

ಶಿರೂರು ಸ್ವಾಮೀಜಿಯ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯನ್ನು ಮಣಿಪಾಲ ಕೆಎಂಸಿ ವೈದ್ಯರು ಇಲಾಖೆಗೆ ಒಪ್ಪಿಸಿದ್ದು, ಇದರಲ್ಲಿ ಸ್ವಾಮೀಜಿಯ ಸಾವು ಸಹಜ ಎಂಬುದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ವರದಿಯನ್ನು ಇದೀಗ ಕುಂದಾಪುರ ಎಸ್ಪಿಯವರಿಗೆ ಒಪ್ಪಿಸಲಾಗಿದೆ.

-ಲಕ್ಷ್ಮಣ್ ಬಿ.ನಿಂಬರ್ಗಿ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News