ಶಾ ನಾಯಕತ್ವದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ: ಬಿಜೆಪಿ ಸಭೆಯಲ್ಲಿ ನಿರ್ಧಾರ

Update: 2018-09-08 17:25 GMT

ಹೊಸದಿಲ್ಲಿ, ಸೆ. 8: ಮುಂದಿನ ಲೋಕಸಭಾ ಚುನಾವಣೆಯನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಾಯಕತ್ವದಲ್ಲಿ ಎದುರಿಸಲು ಬಿಜೆಪಿ ನಿರ್ಧರಿಸಿದೆ. ಅಮಿತ್ ಶಾ ಅವರ ಅಧಿಕಾರವಧಿ ಜನವರಿಯಲ್ಲಿ ಅತ್ಯಗೊಳ್ಳಲಿದೆ. ಆದರೆ, ನೂತನ ರಾಷ್ಟ್ರಾಧ್ಯಕ್ಷರ ಆಯ್ಕೆಗೆ ಆಂತರಿಕ ಚುನಾವಣೆಯನ್ನು ಮುಂದೂಡಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಹೊಸದಿಲ್ಲಿಯಲ್ಲಿ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಬಿಜೆಪಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಭೆಯ ಮೊದಲ ದಿನ ಮಾತನಾಡಿದ ಅಮಿತ್ ಶಾ, ಬಿಜೆಪಿ 2014ಕ್ಕಿಂತಲೂ ಅಧಿಕ ಬಹುಮತದಿಂದ 2019ರಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 2019ರಲ್ಲಿ ನಡೆಯಲಿರುವ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಸಿದ್ಧತೆ ಬಗ್ಗೆ ಚರ್ಚಿಸಲು ಈ ಸಭೆ ಆಯೋಜಿಸಲಾಗಿದೆ. ಈ ಸಂದರ್ಭ ಪಕ್ಷದ ಪದಾಧಿಕಾರಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ‘ಅಜೇಯ ಬಿಜಪೆ’ ಘೋಷಣೆಯನ್ನು ಚುನಾವಣಾ ಘೋಷಣೆಯಾಗಿ ಬಳಸಲು ನಿರ್ಧರಿಸಿದರು.

ತೆಲಂಗಾಣದಲ್ಲಿ ಸೆ. 15ರಿಂದು ಚುನಾವಣಾ ಪ್ರಚಾರ ಆರಂಭ

ಮೆಹಬೂಬನ್ ನಗರದಲ್ಲಿ ಸೆಪ್ಟಂಬರ್ 15ರಂದು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವ ಮೂಲಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತೆಲಂಗಾಣದಲ್ಲಿ ವಿಧಾನ ಸಭೆ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ಎಂಎಲ್‌ಸಿ ಎನ್. ರಾಮಚಂದ್ರ ರಾವ್ ಹೇಳಿದ್ದಾರೆ. ವಿಧಾನಸಭಾ ಕ್ಷೇತ್ರದ ಪ್ರತಿ ವಿಭಾಗದಲ್ಲಿ ಬಿಜೆಪಿ ಸಾರ್ವಜನಿಕ ಸಭೆ ಆಯೋಜಿಸಲಿದೆ. ಪಕ್ಷ ರಾಜ್ಯ ಮಟ್ಟದ ಪ್ರಣಾಳಿಕೆಯನ್ನು ಹೊಂದಿರುವುದಲ್ಲದೆ, ಸ್ಥಳೀಯ ಮಟ್ಟದ ಪ್ರಣಾಳಿಕೆಯನ್ನೂ ಹೊಂದಿರಲಿದೆ ಎಂದು ರಾವ್ ತಿಳಿಸಿದ್ದಾರೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಜೆಪಿ ತೆಲಂಗಾಣದ ಅಧ್ಯಕ್ಷ ಕೆ. ಲಕ್ಷ್ಮಣ್ ಈಗಾಗಲೇ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News