ಮೋದಿ ಸರಕಾರ ಮಿತಿ ಮೀರಿದೆ: ಮನಮೋಹನ್ ಸಿಂಗ್

Update: 2018-09-10 17:22 GMT

ಹೊಸದಿಲ್ಲಿ, ಸೆ. 10: ಪ್ರತಿಪಕ್ಷಗಳ ಭಾರತ್ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಮನಮೋಹನ್ ಸಿಂಗ್ ಅವರು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎಲ್ಲ ಮೀತಿಗಳನ್ನು ಮೀರಿದೆ ಎಂದು ಟೀಕಿಸಿದ್ದಾರೆ. ಮೋದಿ ನೇತೃತ್ವದ ಸರಕಾರ ರಾಷ್ಟ್ರೀಯ ಹಿತಾಸಕ್ತಿ ಹೊಂದಿರದ ಹಲವು ಕಾರ್ಯಗಳನ್ನು ಮಾಡಿದೆ. ಈಗ ಅದು ಮಿತಿ ಮೀರಿದೆ. ಸರಕಾರವನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. 

ದೇಶಾದ್ಯಂತ ಮೋದಿ ಸರಕಾರದ ಕುರಿತು ಜನರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕೇಳಬಹುದು ಎಂದು ಮನಮೋಹನ್ ಸಿಂಗ್ ತಿಳಿಸಿದರು. ತಮ್ಮ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಹಾಗೂ ಸಂಘಟಿತರಾಗಿ ಮುನ್ನುಗ್ಗಲು ಎಲ್ಲ ಪಕ್ಷಗಳಿಗೆ ಇದು ಸಕಾಲ. ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗಿರಿಸಿದರೆ ಮಾತ್ರ ಇದು ಸಾಧ್ಯ. ದೇಶದ ಏಕತೆ, ಸಾರ್ವಭೌಮತೆ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಲು ಸಿದ್ಧರಾಗಿ ಎಂದು ಮನಮೋಹನ್ ಸಿಂಗ್ ಕರೆ ನೀಡಿದ್ದಾರೆ. ನೀಡಿದ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಸಮಾಜ ಎಲ್ಲ ವರ್ಗದ ಅಂದರೆ ಯುವಜನಾಂಗ, ರೈತರು ಹಾಗೂ ಸಾಮಾನ್ಯ ಜನರು ಮೋದಿ ಸರಕಾರದ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಅವರು ಹೇಳಿದರು.

ತೈಲ ಬೆಲೆ ಏರಿಕೆ ಹಾಗೂ ರೂಪಾಯಿ ವೌಲ್ಯ ಕುಸಿತ ಪ್ರತಿಭಟಿಸಿ ದೇಶಾದ್ಯಂತ ಸೋಮವಾರ ನಡೆದ ಪ್ರತಿಭಟನೆ ಸಂದರ್ಭ ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಸೋನಿಯಾ ಗಾಂಧಿ ಉಪಸ್ಥಿತರಿದ್ದರು. 21 ಪ್ರತಿಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News