ಮಾನನಷ್ಟ ಪ್ರಕರಣದಲ್ಲಿ ಕೇಜ್ರಿವಾಲ್ ಖುಲಾಸೆ

Update: 2018-09-10 17:31 GMT

ಹೊಸದಿಲ್ಲಿ,ಸೆ.10: ದಿಲ್ಲಿ ಪೊಲೀಸರ ವಿರುದ್ಧ ‘ಠುಲ್ಲಾ’ ಶಬ್ದವನ್ನು ಬಳಸಿದ್ದಕ್ಕಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ನಡೆಸಿದ ಇಲ್ಲಿಯ ಹೆಚ್ಚುವರಿ ಮುಖ್ಯ ಮಹಾನಗರ ನ್ಯಾಯಾಲಯವು ಸೋಮವಾರ ಅವರನ್ನು ಆರೋಪದಿಂದ ಮುಕ್ತಗೊಳಿಸಿದೆ.

2015ರಲ್ಲಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಕೇಜ್ರಿವಾಲ್ ಅವರು ಭ್ರಷ್ಟಾಚಾರ ನಿಗ್ರಹ ಶಾಖೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಆಪ್ ಸರಕಾರವು ಎದುರಿಸುತ್ತಿರುವ ನಿರ್ಬಂಧಗಳ ಕುರಿತು ಮಾತನಾಡುತ್ತ ದಿಲ್ಲಿ ಪೊಲೀಸರನ್ನು ‘ಠುಲ್ಲಾ‘ಶಬ್ದವನ್ನು ಬಳಸಿ ಬಣ್ಣಿಸಿದ್ದರು. ಕೇಜ್ರಿವಾಲ್ ದಿಲ್ಲಿ ಪೊಲೀಸರ ವಿರುದ್ಧ ಅವಮಾನಕಾರಿ ಶಬ್ದವನ್ನು ಬಳಸಿದ್ದಾರೆಂದು ಆರೋಪಿಸಿ ಕಾನ್‌ಸ್ಟೇಬಲ್ ಅಜಯ ಕುಮಾರ ತನೇಜಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಆಕ್ಷೇಪಿತ ಸಂದರ್ಶನವು ದೂರುದಾರ ತನೇಜಾ ಅವರ ವಿರುದ್ಧವಾಗಿರಲಿಲ್ಲ ಮತ್ತು ಅವರು ಈ ಪ್ರಕರಣದಲ್ಲಿ ನೊಂದ ವ್ಯಕ್ತಿಯಾಗಿಲ್ಲ,ಹೀಗಾಗಿ ಅವರ ದೂರು ಅಂಗೀಕಾರಾರ್ಹವಲ್ಲ ಎಂದು ಹೇಳಿದ ನ್ಯಾ.ಸಮರ ವಿಶಾಲ್ ಅವರು ಕೇಜ್ರಿವಾಲ್‌ರನ್ನು ಖುಲಾಸೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News